ನವದೆಹಲಿ, ಡಿ.29 (DaijiworldNews/PY): ಭಾರತ-ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, "ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈಗಿನಂತೆ ಭಾರತ-ಚೀನಾ ಗಡಿ ಸಮಸ್ಯೆ ಇದ್ದಿದ್ದರೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು" ಎಂದಿದ್ದಾರೆ.
ವಿಡಿಯೋ ಕಾನ್ಪರೆನ್ಸ್ ಮೂಲಕ ಕಾಂಗ್ರೆಸ್ ಪಕಿಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಚೀನಾವು ಭಾರತದ ಭೂಮಿಯನ್ನು ಆಕ್ರಮಿಸಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು. ಆದರೆ, ಚೀನಾ, ಭಾರತದ ಪ್ರದೇಶಗಳನ್ನು ವಶಪಡಿಸಿಕೊಂಡರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ" ಎಂದು ದೂರಿದ್ದಾರೆ.
"ಆರ್ಎಸ್ಎಸ್ ಗುಂಪು ದ್ವೇಷವನ್ನು ಹರಡುತ್ತಿದೆ. ಇದನ್ನು ಪ್ರೀತಿಯಿಂದ ಎದುರಿಸಬೇಕಾಗಿದೆ. ಕಾಂಗ್ರೆಸ್ನ ಸಿದ್ದಾಂತಗಳು ದೇಶದ ಜನರನ್ನು ತಲುಪುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ನ ಹುಸಿ ರಾಷ್ಟ್ರೀಯತೆ ಪ್ರಚಾರಗಳ ವಿರುದ್ದ ನಾವು ಒಟ್ಟುಗೂಡಬೇಕು" ಎಂದಿದ್ದಾರೆ.
"ಬಿಜೆಪಿ ಹಾಗೂ ಆರ್ಎಸ್ಎಸ್ ಧರ್ಮ ರಾಜಕಾರಣ ಮಾಡುತ್ತಿದ್ದು, ಅವರಿಗೆ ಬೇರೆ ಏನೂ ಕೆಲಸ ಇಲ್ಲ. ಈ ದೇಶದ ಜನರ ಹೃದಯವನ್ನು ಕಾಂಗ್ರೆಸ್ ಗೆದ್ದಿದೆ" ಎಂದು ರಾಜಸ್ತಾನದ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.