ತಿರುವನಂತಪುರಂ, ಡಿ 29 (DaijiworldNews/MS): ಬುಧವಾರ ಬೆಳ್ಳಂಬೆಳಗ್ಗೆ ತನ್ನ ಮನೆಗೆ ನುಗ್ಗಿದ ಯುವಕನನ್ನು ಕಳ್ಳನೆಂದು ಶಂಕಿಸಿ ವ್ಯಕ್ತಿಯೊಬ್ಬ ಹತ್ಯೆ ನಡೆಸಿ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತರನ್ನು 19 ವರ್ಷದ ಪೇಟ್ಟಾ ಮೂಲದ ಅನೀಶ್ ಜಾರ್ಜ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಮನೆ ಮಾಲೀಕರ ಮಗಳನ್ನು ಭೇಟಿಯಾಗಲು ಮುಂಜಾನೆ ಅನೀಶ್ ಮನೆಗೆ ನುಗ್ಗಿದ್ದಾನೆ. ಯುವಕನನ್ನು ಚಾಕುವಿನಿಂದ ಇರಿದು ಕೊಂದ ಲಾಲು ಬುಧವಾರ ಬೆಳಗ್ಗೆ ಪೊಲೀಸರ ಮುಂದೆ ಶರಣಾಗಿದ್ದಾನೆ.
ಅನೀಶ್ನನ್ನು ಕಳ್ಳನೆಂದು ಶಂಕಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. "ಮುಂಜಾನೆ 3 ಗಂಟೆ ಸುಮಾರಿಗೆ ಮನೆಯೊಳಗೆ ವಿಚಿತ್ರ ಶಬ್ಧ ಕೇಳಿ ನನಗೆ ಎಚ್ಚರವಾಯಿತು. ಅನೀಶ್ನನ್ನು ಕಳ್ಳ ಎಂದು ಭಾವಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದೇನೆ ಎಂದು ಲಾಲು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಠಾಣೆಗೆ ತೆರಳಿದ ಲಾಲು, ತಮ್ಮ ಮನೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿ, ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದ್ದಾರೆ. ಅನೀಶ್ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪೆಟ್ಟಾದ ಚಾಯಕ್ಕುಡಿ ಲೇನ್ನಲ್ಲಿರುವ ಈಡನ್ ಹೌಸ್ನಲ್ಲಿ ಕೊಲೆ ನಡೆದಿರುವುದಾಗಿ ವರದಿಯಾಗಿದೆ. ಮನೆಯ ಮೊದಲ ಮಹಡಿಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಲುವಾಗಿ ಲಾಲು ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಅವರ ಕುಟುಂಬವನ್ನು ಸ್ಥಳಾಂತರಿಸಿದ್ದಾರೆ. ಕೊಲೆ ಆರೋಪಿ ಲಾಲು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇದ್ಯಾವುದರ ಅರಿವೇ ಇಲ್ಲದೆ ಬೆಳ್ಳಂಬೆಳಗ್ಗೆ ಪೊಲೀಸರನ್ನು ಕಂಡು ನೆರೆಹೊರೆಯವರು ಗೊಂದಲಕ್ಕೆ ಒಳಗಾಗಿದ್ದು, ಬಳಿಕ ವಿಚಾರ ತಿಳಿದು ಶಾಕ್ ಗೆ ಒಳಗಾಗಿದ್ದಾರೆ.