ನವದೆಹಲಿ, ಡಿ 28 (DaijiworldNews/MS): ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪಾಸಿಟಿವ್ ದರ ಶೇಕಡಾ 0.5 ಕ್ಕಿಂತ ಹೆಚ್ಚಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ, ರಾಜ್ಯದಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಜಾರಿಗೊಳಿಸಬೇಕಾದ ನಿರ್ಬಂಧಗಳ ವಿವರವಾದ ಆದೇಶವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ ಉನ್ನತ ಮಟ್ಟದ ಸಭೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಸಿಎಂ ಕೇಜ್ರಿವಾಲ್ ಅವರು , ಸದ್ಯ ಪತ್ತೆಯಾಗಿರುವ ಕೋವಿಡ್-19 ಪ್ರಕರಣಗಳು ಸೌಮ್ಯ ಸ್ವರೂಪದ್ದಾಗಿದ್ದು, ಆಮ್ಲಜನಕದ ಬಳಕೆ ಅಥವಾ ವೆಂಟಿಲೇಟರ್ ಬಳಕೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದರೆ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿದ್ದಾರೆ.
ಯೆಲ್ಲೋ ಅಲರ್ಟ್ ಘೋಷಣೆಯಲ್ಲಿ ರಾತ್ರಿ ಕರ್ಫ್ಯೂ, ಶಾಲೆಗಳು ಮತ್ತು ಕಾಲೇಜುಗಳನ್ನು ಬಂದ್ ಮಾಡುವುದು, ಸಮ-ಬೆಸ ಆಧಾರದ ಮೇಲೆ ಅನಿವಾರ್ಯವಲ್ಲದ ಅಂಗಡಿಗಳನ್ನು ತೆರೆಯುವುದು. ಮೆಟ್ರೋ ರೈಲುಗಳು ಮತ್ತು ಬಸ್ಗಳಲ್ಲಿ ಆಸನ ಸಾಮರ್ಥ್ಯದ ಅರ್ಧದಷ್ಟು ಜನರು ಮಾತ್ರ ಪ್ರಯಾಣಿಸಬೇಕು ಮುಂತಾದ ನಿರ್ಬಂಧಗಳನ್ನು ಒಳಗೊಂಡಿದೆ.