ರಾಯಗಡ ,ಡಿ 28 (DaijiworldNews/MS): ಗ್ರಾಮದ ಮಹಿಳಾ ಸರಪಂಚ್ ನನ್ನು ಕೊಲೆ ಮಾಡಿ ಆಕೆಯ ನಗ್ನ ದೇಹವನ್ನು ಪೊದೆಗಳಲ್ಲಿ ಎಸೆದ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಮಹಾಡ್ ತಾಲೂಕಿನ ಬೆಳೋಶಿ ಗ್ರಾಮದಲ್ಲಿ ಡಿ.27ರ ಸೋಮವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ.
ರಸ್ತೆಬದಿಯಲ್ಲಿ ಎಸೆದಿದ್ದ ಗೋಣಿ ಚೀಲದಲ್ಲಿ ಮೃತದೇಹವನ್ನು ಗಮನಿಸಿ ಸ್ಥಳೀಯ ಯುವಕರು ಅದನ್ನು ಪರಿಶೀಲಿಸಲು ಮುಂದಾದರು. ಈ ಸಂದರ್ಭ ಮಹಿಳೆಯ ನಗ್ನ ಮೃತದೇಹ ಮೇಲೆ ಗಾಯದ ಗುರುತುಗಳನ್ನು ಅವರು ಪತ್ತೆ ಮಾಡಿದ್ದು ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಹತ್ಯೆಯಾದ ಮಹಿಳೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಯ ಸರಪಂಚ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಮೃತರ ಸಂಬಂಧಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು ವೈದ್ಯಕೀಯ ವರದಿಯ ಆಧಾರದ ಮೇಲೆ ಇತರ ಆರೋಪಗಳನ್ನು ಎಫ್ಐಆರ್ಗೆ ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.