ಬೆಂಗಳೂರು, ಡಿ 28 (DaijiworldNews/MS): ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಈ ನಾಡಿಗಾಗಿ, ನಾಡಿನ ಏಳಿಗೆಗಾಗಿ ತಮ್ಮ ಇಡೀ ಬದುಕು ಸವೆಸಿದವರು. ಇದು ಅಮ್ಮ-ಮಗ ತಮ್ಮ ರಕ್ತ ಬಸಿದು, ಪ್ರಾಣ ತೆತ್ತು ಕಟ್ಟಿದ ಪಕ್ಷ. ಅವರು ಪ್ರಾಣ ಕಳೆದುಕೊಂಡರು, ದೇಶ ಉಳಿಸಿದರು. ಆದರೆ ಇಂದು ದೇಶ ಉಳಿಸುವ ಕರೆಗೆ ನಾವೆಲ್ಲರೂ ಓಗೊಡಬೇಕಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು, ಕಾಂಗ್ರೆಸ್ ಪಕ್ಷ ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಭಾರತವನ್ನು ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ 137 ಸಂಸ್ಥಾಪನಾ ದಿನದ ಶುಭ ಹಾರೈಕೆ ಕೋರಿ ಸರಣಿ ಟ್ವೀಟ್ ಮಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ಹಾಗೂ ಆರೆಸೆಸ್ಸೆ ವಿರುದ್ದ ಕಿಡಿಕಾರಿದ್ದಾರೆ. "ಆಧುನಿಕ ಭಾರತದ ಇತಿಹಾಸವೆಂದರೆ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇತಿಹಾಸವೇ ಆಗಿದೆ. ಅದು ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಉಳಿಸಿದ ಮತ್ತು ಸ್ವಾತಂತ್ರ್ಯಾ ನಂತರ ದೇಶ ಕಟ್ಟಿದ ಇತಿಹಾಸವೂ ಹೌದು.ಸ್ವಾತ್ರಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಲಕ್ಷಾಂತರ ದೇಶಪ್ರೇಮಿ ಸದಸ್ಯರು ಗುಂಡಿಗೆ ಎದೆ ಕೊಟ್ಟರು, ಹಲವರು ಲಾಠಿಗೆ ಎದೆ ಕೊಟ್ಟರು, ಸಾವಿರಾರು ಜನ ಹುತಾತ್ಮರಾದರು, ಕಾಂಗ್ರೆಸ್ ಪಕ್ಷದ ಈ ಧೀರ ಹೋರಾಟಗಾರರು ಹರಿಸಿದ ರಕ್ತ, ಬೆವರಿನ ಫಲವೇ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ"
"ಮಹಾತ್ಮ ಗಾಂಧೀಜಿಯವರಿಂದ ತಾಯಿಯ ಹೃದಯವನ್ನು, ಜವಾಹರಲಾಲ ನೆಹರು ಅವರಿಂದ ವೈಚಾರಿಕ ಸ್ಪಷ್ಟತೆಯನ್ನೂ, ವಲ್ಲಭಬಾಯಿ ಪಟೇಲ್ರಿಂದ ಉಕ್ಕಿನ ಸ್ಥೈರ್ಯವನ್ನೂ ಪಡೆದ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಸಂಗ್ರಾಮದ ಗುರಿ ಈಡೇರಿಕೆಯಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಧುಮುಕದಿದ್ದರೆ ಏನಾಗುತ್ತಿತ್ತು? ನಾವಿಂದು ಕೂಡಾ ಬ್ರಿಟಿಷರ ಗುಲಾಮಗಿರಿಗೆ ಸಿಕ್ಕಿ ನರಳಾಡುತ್ತಿದ್ದೆವೇನೋ? ಸ್ವತಂತ್ರಭಾರತದ ನಾಯಕತ್ವವನ್ನು ಕಾಂಗ್ರೆಸ್ ಪಕ್ಷ ವಹಿಸದೆ ಹೋಗಿದ್ದರೆ ಇಂದು ಕೂಡಾ ದೇಶ ಬಡತನ, ಅನಕ್ಷರತೆ, ಅಸಮಾನತೆ, ನಿರುದ್ಯೋಗದ ಸಮಸ್ಯೆಗಳಲ್ಲಿಯೇ ಉರುಳಾಡುತ್ತಿತ್ತೋ ಏನೋ?" ಎಂದು ಹೇಳಿದ್ದಾರೆ.
"ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಹಾಗೂ ಪ್ರಸ್ತುತ ರಾಹುಲ್ ಗಾಂಧಿ ಅವರು ಪ್ರತಿಪಾದಿಸುತ್ತಿರುವ ವಿಚಾರಧಾರೆಗಳಿಗೆ ಅನುಗುಣವಾಗಿ ನವಭಾರತ ನಿರ್ಮಾಣಕ್ಕೆ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ವೈಯಕ್ತಿಕವಾದುದಲ್ಲ, ಇದೊಂದು ಸೈದ್ದಾಂತಿಕ ಹೋರಾಟ. ನಮ್ಮದು ಜನಪರವಾದ ಸಿದ್ದಾಂತ, ಆ ಸಿದ್ದಾಂತವನ್ನು ನಾವು ಪಡೆದುಕೊಂಡಿರುವುದು ಸಂವಿಧಾನದಿಂದ.ಬಿಜೆಪಿಯದ್ದು ಜನವಿರೋಧಿ ಸಿದ್ದಾಂತ, ಆ ಸಿದ್ದಾಂತವನ್ನು ಅವರು ಪಡೆದಿರುವುದು ಆರ್ ಎಸ್ ಎಸ್ ನಿಂದ. ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಆರ್.ಎಸ್.ಎಸ್ ಮತ್ತು ಸಂಘ ಪರಿವಾರವನ್ನು ನಿರ್ಭೀತಿಯಿಂದ ಎದುರಿಸಿ ಎಂದು ಕರೆ ಕೊಟ್ಟರು. ಆವರ ಈ ಸೈದ್ದಾಂತಿಕ ಹೋರಾಟ ನಮ್ಮೆಲ್ಲರ ಹೋರಾಟವಾಗಬೇಕು. ನಮ್ಮಲ್ಲಿ ಬಹಳಷ್ಟು ಮಂದಿ ಆರ್.ಎಸ್.ಎಸ್ ವಿರುದ್ಧ ಮಾತನಾಡಲು ಹಿಂಜರಿಯುತ್ತಿದ್ದಾರೆ. ನಮ್ಮ ಸೈದ್ಧಾಂತಿಕ ಹೋರಾಟವನ್ನು ಬಲಗೊಳಿಸಲು ನಮ್ಮೆಲ್ಲ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ಸಿದ್ದಾಂತವನ್ನು ಧೈರ್ಯದಿಂದ ಪ್ರತಿಪಾದಿಸಬೇಕು ಮತ್ತು ವಿರೋಧಿ ಸಿದ್ದಾಂತ ವನ್ನು ದಿಟ್ಟತನದಿಂದ ಪ್ರಶ್ನಿಸಬೇಕು" ಎಂದು ಹೇಳಿದ್ದಾರೆ
"ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದುಹಾಕಲಾಗುತ್ತಿದೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವವರ ದಮನ ಮಾಡಲಾಗುತ್ತಿದೆ. ಗಾಂಧಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ. ಇದು ನಾವೆಲ್ಲ ಕೈಕಟ್ಟಿ ತೆಪ್ಪಗೆ ಕೂರುವ ಕಾಲ ಅಲ್ಲ. ದೇಶ ಉಳಿಸುವ ಕರೆಗೆ ನಾವೆಲ್ಲರೂ ಓಗೊಡಬೇಕಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು, ಕಾಂಗ್ರೆಸ್ ಪಕ್ಷ ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಭಾರತವನ್ನು ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ "ಎಂದು ಕರೆ ನೀಡಿದ್ದಾರೆ
"ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ, ಕೈಗೆ ಕೈ ಜೋಡಿಸಿ ನವ ಕರ್ನಾಟಕವನ್ನೊಳಗೊಂಡ ನವಭಾರತವನ್ನು ನಿರ್ಮಿಸಲು ನಾವು ಸಂಕಲ್ಪ ಮಾಡಬೇಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.