ಕಾನ್ಪುರ, ಡಿ 28 (DaijiworldNews/MS): ಉತ್ತರಪ್ರದೇಶದ ಸುಗಂಧದ್ರವ್ಯ ಉದ್ಯಮಿ ಪಿಯೂಷ್ ಜೈನ್ ತೆರಿಗೆ ವಂಚನೆ ಆರೋಪದ ಮೇಲೆ ಬಂಧಿಸಲಾಗಿದೆ. ಡಿ.24 ರಂದುಆದಾಯ ತೆರಿಗೆ ಇಲಾಖೆ ಉದ್ಯಮಿಯ ಮನೆ ಮೇಲೆ ದಾಳಿ ಮಾಡಿದ್ದು, ಈವರೆಗೆ 194.45 ಕೋಟಿ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನ, ಬೆಳ್ಳಿಯನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದು, ಇನ್ನೂ ಕೂಡಾ ಶೋಧ ಕಾರ್ಯ ಮತ್ತು ಲೆಕ್ಕಾಚಾರ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಉತ್ತರಪ್ರದೇಶದ ಕನ್ನೌಜ್ ನಲ್ಲಿರುವ ಜೈನ್ ಒಡೆತನದ ನಿವಾಸ ಹಾಗೂ ವಿವಿಧ ಕಡೆ ಸರಣಿ ದಾಳಿ ನಡೆಸಿದ ಅಧಿಕಾರಿಗಳು ನಗದು ಸೇರಿದಂತೆ ₹ 257 ಕೋಟಿ ಮೌಲ್ಯಕ್ಕೂ 23 ಕೆಜಿಗೂ ಅಧಿಕ ಚಿನ್ನ ಅಧಿಕ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡ ನಗದು ₹ 194.45 ಕೋಟಿ ನಗದು ಎಂದು ಜಿಎಸ್ ಟಿ (ಸರಕು ಮತ್ತು ಸೇವೆಗೆಳ ತೆರಿಗೆ) ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶ ಕನ್ನೌಜ್ ನ ಛುಪ್ಪಾಟ್ಟಿ ಪ್ರದೇಶದ ನಿವಾಸಿಯಾಗಿರುವ ಪಿಯೂಷ್ ಜೈನ್, ತನ್ನ ಉದ್ಯಮಕ್ಕಾಗಿ ಹಿರಿಯರ ಚಿನ್ನವನ್ನು ಮಾರಾಟ ಮಾಡಿ ಹಣವನ್ನು ಸಂಗ್ರಹಿಸಿರುವುದಾಗಿ ಮೂಲಗಳು ಹೇಳಿವೆ. ಆದರೆ ಈವರೆಗೂ ಜೈನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಣದ ಜತೆಯಲ್ಲಿ ಚಿನ್ನ, ಬೆಳ್ಳಿ, ಲೆಕ್ಕವಿಲ್ಲದಷ್ಟು ಗಂಧದ ಎಣ್ಣೆ ಮತ್ತು ಭಾರೀ ಪ್ರಮಾಣದ ಸುಗಂಧ ದ್ರವ್ಯವನ್ನು ಜೈನ್ ಮನೆ ಹಾಗೂ ಕಾರ್ಖಾನೆಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಜೈನ್ರನ್ನು ಬಂಧಿಸಿರುವ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಗುಜರಾತಿನ ಅಹಮದಾಬಾದ್ ನಗರಕ್ಕೆ ಕರೆತಂದಿದ್ದಾರೆ