ಚೆನ್ನೈ, ಡಿ. 27 (DaijiworldNews/HR): ಚೆನ್ನೈನ ಚೆಂಗಲ್ಪಟುವಿನ ಪಾಲಾರ್ ನದಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಒಂದೇ ಕುಟುಂಬದ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ನಾಪತ್ತೆಯಾದವರನ್ನು ಲಿಯೋನ್ಸಿಂಗ್ ರಾಜಾ(38), ಮಗಳು ಪರ್ಸಿ(16) ಮತ್ತು ಸಹೋದರನ ಮಗ ಲಿವಿಂಗ್ಸ್ಟನ್ (19) ಎಂದು ಗುರುತಿಸಲಾಗಿದೆ.
ಇನ್ನು ಆಚರಪಕ್ಕಂನ ಮಲೈ ಮಾಧಾ ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದ 20 ಜನರ ಗುಂಪು ಸೆಲ್ಫಿ ಕ್ಲಿಕ್ಕಿಸಲು ನದಿಯ ಬಳಿ ಹೋಗಿದ್ದು, ಲಿಯೋನ್ಸಿಂಗ್ ರಾಜಾ ಮತ್ತು ಮಕ್ಕಳು ನದಿಯ ಆಳಕ್ಕೆ ಇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಪ್ರಯತ್ನಿಸಿದರು. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಚೆನ್ನೈನ ಮುಳುಗು ತಜ್ಞರು ಮತ್ತು ಸ್ಥಳೀಯರು ಮೃತದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.