ಬೆಂಗಳೂರು, ಡಿ 27 (DaijiworldNews/MS): ದೇಶದಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಜ.3ರಿಂದ ಲಸಿಕೆ ನೀಡುವುದಾಗಿ ಪ್ರಧಾನಿ ಘೋಷಿಸಿದ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆ ಲಸಿಕೆ ವಿತರಣೆಗೆ ಸಿದ್ದತೆ ನಡೆಸಿದೆ. ಆದರೆ ಮಕ್ಕಳಿಗೆ ಲಸಿಕೆ ನೀಡಲು ಯಾವ ಮಾರ್ಗಸೂಚಿ ಅನುಸರಿಸಬೇಕು ಎಂದು ಕೇಂದ್ರ ತಿಳಿಸಿರಲಿಲ್ಲ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಆಯಾ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮದೊಂದಿಗೆ ಮಾತನಾಡಿದಂತ ಸಿಎಂ ಬೊಮ್ಮಾಯಿ, ಆಯಾ ಶಾಲೆಗಳಲ್ಲಿ ಲಸಿಕೆ ನೀಡುವ ಕುರಿತಂತೆ ಲಸಿಕಾ ಅಭಿಯಾನಗಳಿಗೆ ಸಿದ್ಧತೆ ನಡೆಸುತ್ತಿದ್ದೇವೆ. 60 ವರ್ಷ ಮೇಲ್ಪಟ್ಟವರಿಗೆ ಸಹ-ಅಸ್ವಸ್ಥತೆ ಹೊಂದಿರುವವರಿಗೆ 'ಮುನ್ನೆಚ್ಚರಿಕೆ ಡೋಸ್' ನೀಡಲು ಸಿದ್ಧತೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಗಳಲ್ಲಿ ಲಸಿಕೆ ಅಭಿಯಾನ ಜನವರಿ 3 ರಿಂದ ಪ್ರಾರಂಭವಾಗಲಿದ್ದು, ಜನವರಿ 10 ರಿಂದ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸಹ-ಅಸ್ವಸ್ಥತೆಹೊಂದಿರುವ ಅರ್ಹರಿಗೆ ಇನ್ನೋಕ್ಯುಲೇಷನ್ ಶಿಬಿರಗಳು ಕೇಂದ್ರದ ನಿರ್ದೇಶನದಂತೆ ಪ್ರಾರಂಭವಾಗುತ್ತವೆ ಎಂದು ಹೇಳಿದ್ದಾರೆ.
ಮುಂದಿನ ಎರಡು ಮೂರು ತಿಂಗಳಲ್ಲಿ ಎಸೆಸೆಲ್ಸಿ ಮತ್ತುಪಿಯುಸಿ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಆ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿ 15 ರಿಂದ 18 ವರ್ಷದ ಒಲಗಿನ ೪೩ ಲಕ್ಷ ಮಂದಿ ಇದ್ದು ಇವರೆಲ್ಲರೂ ಬೂಸ್ಟರ್ ಡೋಸ್ ಪಡೆಯಲು ಅರ್ಹರಿದ್ದಾರೆ.