ಬೆಂಗಳೂರು, ಡಿ 27 (DaijiworldNews/MS): ಯುಜಿಸಿ-ಎನ್ಇಟಿ ಕನ್ನಡ ಐಚ್ಛಿಕ ಭಾಷಾ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳಿದ್ದುದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಯುಜಿಸಿ-ಎನ್ಇಟಿ ಕನ್ನಡ ಐಚ್ಛಿಕ ಭಾಷಾ ಪ್ರಶ್ನೆ ಪತ್ರಿಕೆಯ 100 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹಿಂದಿಯಲ್ಲೇ ಇದ್ದವು. ಅದನ್ನು ಕಂಡ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿ ಪರೀಕ್ಷೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದಾರೆ. ಇದು ಕನ್ನಡದ ಮೇಲಿನ ತಾತ್ಸಾರ ಹಾಗೂ ಹಿಂದಿ ಹೇರಿಕೆಯ ವಿಪರೀತ. ಅಲ್ಲದೆ, ಪರೀಕ್ಷೆ ನಡೆಸಿದ ಸಂಸ್ಥೆ ಮಾಡಿರುವ ಕನ್ನಡ ದ್ರೋಹ ಎಂದು ಕಟುವಾಗಿ ಟೀಕಿಸಿದ್ದಾರೆ. ಕನ್ನಡದ ವಿರುದ್ಧ ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯಗಳನ್ನು ಎಸಗಲಾಗುತ್ತಿದೆ. ಕನ್ನಡಿಗರ ಬಗ್ಗೆ ಈ ಕಠಿಣತೆ ಏಕೆ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಇನ್ನು ಹಲವಾರು ಉದ್ಯೋಗ ಅವಕಾಶಗಳಲ್ಲಿ ಕನ್ನಡದ ಪ್ರತಿಭಾವಂತ ಯುವಜನರಿಗೆ ಅನ್ಯಾಯ ಆಗುತ್ತಿದೆ. ಕನ್ನಡಿಗರ ಕಡೆಗಣನೆ ದೇಶಕ್ಕೆ ಒಳ್ಳೆಯದಲ್ಲ. ನಮ್ಮ ಮೌನ ನಮ್ಮ ದೌರ್ಬಲ್ಯವಲ್ಲ ಎಂದು ಎಚ್ಚರಿಸಿದ್ದಾರೆ.
ಕನ್ನಡಿಗರ ಮೇಲಿನ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೂಡಲೇ ಪರೀಕ್ಷಾ ಸಂಸ್ಥೆಯು ಆಗಿರುವ ಲೋಪ ಸರಿಮಾಡಿ ಪುನ: ಪರೀಕ್ಷೆ ನಡೆಸಬೇಕು. ಎರಡು ವರ್ಷಗಳಿಂದ ಪರೀಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ ಕ್ರಮ ವಹಿಸಬೇಕು ಎಂದು ಅಗ್ರಹಿಸಿದ್ದಾರೆ.
ಪರೀಕ್ಷೆ ಅವ್ಯವಸ್ಥೆ ಆಗರವಾಗಿತ್ತು ಎನ್ನುವುದು ತಿಳಿದುಬಂದಿದೆ. ಅದನ್ನು ಸರಿಪಡಿಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಬೇಕು. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ. ಹಿಂದಿ ಹೇರಿಕೆ ನಿಲ್ಲಿಸಬೇಕು ಎಂದು ಹೇಳಿದ್ದಾರೆ.