ರಾಯ್ಪುರ್, ಡಿ 27 (DaijiworldNews/MS): ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ ಹಾಗೂ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿ ಭಾಷಣ ಮಾಡಿದ ಆರೋಪದ ಹಿನ್ನಲೆಯಲ್ಲಿ ಹಿಂದೂ ಧಾರ್ಮಿಕ ಮುಖಂಡ , ಆಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ವಿರುದ್ಧ ಛತ್ತೀಸ್ಗಢ ಪೊಲೀಸರು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಭಾನುವಾರ ಸಂಜೆ ರಾಯ್ಪುರ್ ದ ರಾವಣ ಭಟ ಮೈದಾನದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸದ್ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ್ದ ಆಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ರಾಷ್ಟ್ರಪಿತನ ವಿರುದ್ಧ ‘ನಿಂದನೀಯ’ ಪದವನ್ನು ಬಳಸಿದ್ದ ನಿಷ್ಠಾವಂತ ಹಿಂದೂ ನಾಯಕನನ್ನು ರಾಷ್ಟ್ರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದರು. ಮಾತ್ರವಲ್ಲದೆ " ಇಸ್ಲಾಂ ಧರ್ಮದ ಪ್ರಮುಖ ಗುರಿ ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದಾಗಿದೆ. ಅವರು ನಮ್ಮ ಕಣ್ಣ ಮುಂದೆಯೇ 1947 ರಲ್ಲಿ (ವಿಭಜನೆಯನ್ನು ಉಲ್ಲೇಖಿಸಿ) ವಶಪಡಿಸಿಕೊಂಡರು ... ಅದಕ್ಕೂ ಮೊದಲು ಇರಾನ್, ಇರಾಕ್ ಮತ್ತು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರು, ಮಾತ್ರವಲ್ಲದೆ ರಾಜಕೀಯದ ಮೂಲಕ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ವಶಪಡಿಸಿಕೊಂಡರು. ಹೀಗಾಗಿ ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಸ್ಕರಿಸುತ್ತೇನೆ" ಎಂದು ಹೇಳಿದ್ದರು.
ಕಾಂಗ್ರೆಸ್ ಮುಖಂಡ ಪ್ರಮೋದ್ ದುಬೆ ಅವರ ದೂರಿನ ಆಧಾರದ ಮೇಲೆ, ಭಾನುವಾರ ರಾತ್ರಿ ಕಾಳಿಚರಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (2) ಮತ್ತು 294 ರ ಅಡಿಯಲ್ಲಿ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.