ಚಂಡಿಗಢ, ಡಿ. 26 (DaijiwoldNews/HR): ಅಪಘಾತದಲ್ಲಿ ಮೃತಪಟ್ಟ ಎರಡೂವರೆ ವರ್ಷದ ಬಾಲಕಿ ಅನಿಕಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಬಾಲಕಿಯ ತಂದೆ ತನ್ನ ಪತ್ನಿ, ಮಗ, ಮಗಳು ಸೇರಿ ಕುಟುಂಬದ 7 ಸದಸ್ಯರನ್ನ ಕಳೆದುಕೊಂಡು ನೋವಿನಲ್ಲಿದ್ದರೂ ಮಗಳ ಅಂಗಾಗದಾನ ಮಾಡಿ 9 ಜನರಿಗೆ ಬದುಕು ಕೊಟ್ಟಿದ್ದಾರೆ.
ಅನಿಕಾ ಬೆಂಗಳೂರು ಮೂಲದ ಉದ್ಯಮಿ ಅಮಿತ್ ಗುಪ್ತಾ ಮತ್ತು ಕೀರ್ತಿ ಗುಪ್ತಾ ದಂಪತಿಯ ಪುತ್ರಿ. ಈ ದಂಪತಿಗೆ 6 ವರ್ಷದ ಮಗ ಕೂಡ ಇದ್ದ. ಚಂಡಿಗಢದ ಮೊಹಾಲಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೀರ್ತಿ ಗುಪ್ತಾ ಮತ್ತು ಇವರ ಮಗ ನುವಂಶ್ ಸೇರಿ ಕುಟುಂಬದ 6 ಮಂದಿ ಸಾವನ್ನಪ್ಪಿದರು.
ಇನ್ನು ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ಅನಿಕಾಳನ್ನು ಚಂಡೀಗಢ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿ ಅನಿಕಾಳ ಮಿದುಳು ನಿಷ್ಕ್ರಯಗೊಂಡಿತ್ತು. ಇನ್ನು ಅನಿಕಾ ಬದುಕುವ ಚಾನ್ಸೇ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ನೋವಿನಲ್ಲೂ ಮಹತ್ವದ ನಿರ್ಧಾರ ತೆಗೆದುಕೊಂಡ ತಂದೆ ಅಮಿತ್, ಮಗಳ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು.
ಕಿಡ್ನಿ, ಲಿವರ್, ಕಾರ್ನಿಯಾವನ್ನು ದಾನ ಮಾಡಿದ್ದು, ಅನಿಕಾಳ ಅಂಗಾಂಗಗಳನ್ನು 9 ಜನರಿಗೆ ಅಳವಡಿಸಲಾಗಿದ್ದು, ಆ ಮೂಲಕ 9 ಜನರಿಗೆ ಬದುಕು ಸಿಕ್ಕಂತಾಗಿದೆ.