ಬೆಂಗಳೂರು, ಡಿ.26 (DaijiworldNews/PY): "ರಾಜ್ಯವನ್ನು ಜಾತಿ ಆಧಾರದ ಮೇಲೆ ಹರಿದು ಚೂರು ಮಾಡುವುದೇ ಸಿದ್ದರಾಮಯ್ಯರ ಉದ್ದೇಶವಾಗಿತ್ತು" ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಸಿದ್ದರಾಮಯ್ಯನವರೇ, ನಿಮ್ಮ ಸುಳ್ಳಿನ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ!!! ರಾಜ್ಯವನ್ನು ಜಾತಿ ಆಧಾರದ ಮೇಲೆ ಹರಿದು ಚೂರು ಮಾಡುವುದೇ ನಿಮ್ಮ ಉದ್ದೇಶವಾಗಿತ್ತು. ಸಮಾಜವನ್ನು ಅಶಾಂತಿಯ ಗೂಡಾಗಿಸಲು ನೀವು ಜಾತಿ ಗಣತಿ ಆರಂಭಿಸಿದಿರಿ. ಆದರೆ ಅದಕ್ಕೆ ಸಾಮಾಜಿಕ ಹಾಗೂ ಆರ್ಥಿಕ ಗಣತಿ ಎಂಬ ಹೆಸರು ನೀಡಿದಿರಿ. ಎಂಥಹ ಸುಳ್ಳು!!?" ಎಂದಿದೆ.
"ಜಾತಿ ಗಣತಿಯ ಉದ್ದೇಶ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುವುದಾಗಿರಲಿಲ್ಲ. ಅದೊಂದು ಸಿದ್ದರಾಮಯ್ಯ ಅವರ ಚುನಾವಣಾ ತಂತ್ರಗಾರಿಕೆಯಾಗಿತ್ತು. ಯಾವ ಕ್ಷೇತ್ರದಲ್ಲಿ ಯಾವ ಜಾತಿಗೆ ಸೇರಿದ ಎಷ್ಟು ಜನರಿದ್ದಾರೆ, ಕ್ಷೇತ್ರವಾರು ಧಾರ್ಮಿಕ ಪ್ರಾಬಲ್ಯ ಹೇಗಿದೆ ಎಂದು ಅಂದಾಜಿಸಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವುದಷ್ಟೇ ನಿಮ್ಮ ಉದ್ದೇಶವಾಗಿತ್ತು" ಎಂದು ಹೇಳಿದೆ.
"ಉದ್ದೇಶ ಶುದ್ಧಿ ಇಲ್ಲದ ಯಾವ ಕಾರ್ಯವೂ ಯಶಸ್ವಿಯಾಗುವುದಿಲ್ಲ. ಇದಕ್ಕೆ ಸಿದ್ದರಾಮಯ್ಯ ಜಾತಿ ಗಣತಿಯೇ ದೊಡ್ಡ ಉದಾಹರಣೆ. ಸಮಾಜವನ್ನು ಒಡೆಯುವುದಕ್ಕಾಗಿ ಜನರ ತೆರಿಗೆ ಹಣದಲ್ಲಿ ನೀವು ನೂರಾರು ಕೋಟಿ ವೆಚ್ಚ ಮಾಡಿದರೂ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯ್ತು" ಎಂದಿದೆ.
"ಸಿದ್ದರಾಮಯ್ಯ ಅವರ ಜಾತಿ ಗಣತಿ ವರದಿ ಸರ್ಕಾರ ಅಂಗೀಕರಿಸುವುದಕ್ಕೆ ಮುನ್ನವೇ ಬಹಿರಂಗವಾಯ್ತು. ಚುನಾವಣಾ ಆಕಾಂಕ್ಷಿಗಳು ಅದನ್ನು ಬೀದಿ ಬೀದಿಯಲ್ಲಿ ಮಾರಾಟ ಮಾಡಿದರು. ಪಾವಿತ್ರ್ಯವೇ ಇಲ್ಲದ ಈ ವರದಿಯನ್ನು ಸಿದ್ದರಾಮಯ್ಯ ಅವರು ಈಗಲೂ ರಾಜಕೀಯಕ್ಕೆ ಬಳಸುತ್ತಿದ್ದಾರೆ" ಎಂದು ಆರೋಪಿಸಿದೆ.