ಬೆಂಗಳೂರು, ಡಿ.26 (DaijiworldNews/PY): "ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡಿಸಿ, ಅಲ್ಲಿ ತಪ್ಪು ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಬೇಕು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಳಗಾವಿ ವಿಚಾರದಲ್ಲಿ ತಿಳಿಗೇಡಿಗಳ ಪುಂಡಾಟಿಕೆ ಕುರಿತು ಸರ್ಕಾರ ಮಾತನಾಡುತ್ತದೆ ಎಂದು ಹೇಳಿದರೆ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರದ ಬಳಿ ನಿಯೋಗ ಕರೆದುಕೊಂಡು ಹೋಗಿ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕು" ಎಂದಿದ್ದಾರೆ.
"ಮಹಾರಾಷ್ಟ್ರದಲ್ಲಿ ನಮ್ಮ ಧ್ವಜ ಸುಟ್ಟಿದ್ದಾರೆ. ಚಿಂದಿ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಬಳಿ ನಿಯೋಗ ಕರೆದುಕೊಂಡು ಹೋಗಿ ಪ್ರಧಾನಿಗಳೊಂದಿಗೆ ಕುಳಿತು ಮಾತನಾಡಬೇಕು. ಮಹಾರಾಷ್ಟ್ರ ಮುಖ್ಯಮಂತ್ರಿಗಳ ಬಳಿ ಮಾತನಾಡಬೇಕು. ಅಲ್ಲಿಯ ಪುಂಡರಿಗೆ ಎಚ್ಚರಿಕೆ ನೀಡಲು ಹೇಳಬೇಕು" ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಹೇರಿದ ನೈಟ್ ಕರ್ಫ್ಯೂ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಕಾನೂನು ಸುವ್ಯವಸ್ಥೆಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ಸರ್ಕಾರ ಕೈಗೊಂಡಿದೆ. ಇದಕ್ಕೆ ನಮ್ಮ ಬೆಂಬಲವಿದೆ" ಎಂದಿದ್ಧಾರೆ.