ಪ್ರಯಾಗರಾಜ್, ಡಿ.26 (DaijiworldNews/PY): "ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಇಲ್ಲಿನ ರಸ್ತೆ ನಿರ್ಮಾಣ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ವಿನಿಯೋಗಿಸಲಿದೆ" ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಬಾಬುಗಂಜ್, ಉಂಚಹಾರ್, ಜಗದೀಶ್ಪುರ, ಅಲ್ಲಾಪುರ್ನಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, "ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಮುಂದಿನ ಐದು ವರ್ಷಗಳಲ್ಲಿ ಉತ್ತರಪ್ರದೇಶದ ರಸ್ತೆ ಯೋಜನೆಗಳಿಗಾಗಿ 5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು. ರಾಜ್ಯದ ರಸ್ತೆಗಳನ್ನು ಅಮೇರಿಕಾದ ರಸ್ತೆಗಳಷ್ಟು ಉತ್ತಮವಾಗಿ ನಿರ್ಮಾಣ ಮಾಡುತ್ತೇವೆ" ಎಂದಿದ್ದಾರೆ.
"ಮುಂಬರುವ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಕೇಶವ್ ಪ್ರಸಾದ್ ಮೌರ್ಯ ಅವರ ನೇತೃತ್ವದಲ್ಲಿ ಡಬಲ್ ಎಂಜಿನ್ ಸರ್ಕಾರಕ್ಕೆ ಮತ ನೀಡಿ. ಉತ್ತರ ಪ್ರದೇಶವನ್ನು ಅಮೇರಿಕಾದ ರಾಜ್ಯಗಳಂತೆ ಅಭಿವೃದ್ಧಿಪಡಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಎಲ್ಲಾ ಹಳ್ಳಿಗಳನ್ನು, ರಸ್ತೆಗಳನ್ನು ಹಾಗೂ ಹೆದ್ದಾರಿಗಳೊಂದಿಗೆ ಸಂಪರ್ಕಿಸಬೇಕು ಎನ್ನುವುದು ಮಾಜಿ ಪ್ರಧಾನಿ ದಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು" ಎಂದಿದ್ದಾರೆ.