ಗದಗ, ಡಿ.26 (DaijiworldNews/PY): "ಸಿಎಂ ಬದಲಾವಣೆ ವಿಚಾರ ಕೇವಲ ವದಂತಿ. ನಾನು ಹಾಗೂ ಸಿಎಂ ಆತ್ಮೀಯರು. ಆ ರೀತಿ ಇದ್ದಿದ್ದರೆ ನನ್ನ ಬಳಿ ವಿಷಯ ಹಂಚಿಕೊಳ್ಳುತ್ತಿದ್ದರು" ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಒಂದಿಬ್ಬರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಕನಸು ಕಾಣುವುದು ತಪ್ಪಲ್ಲ. ಆದರೆ ಸಿಎಂ ಬದಲಾವಣೆ ಆಗುತ್ತಾರೆ ಎನ್ನುವುದು ಗಾಳಿ ಸುದ್ದಿ" ಎಂದಿದ್ದಾರೆ.
"ನಾಳೆ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ2023ರವರೆಗೆ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಅವರು ಚಿಕಿತ್ಸೆಯ ಸಲುವಾಗಿ ವಿದೇಶಕ್ಕೆ ಹೋಗುತ್ತಾರೆ ಎನ್ನುವುದು ಸುಳ್ಳು" ಎಂದು ಹೇಳಿದ್ದಾರೆ.
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಭ್ರಷ್ಟಾಚಾರ ರಹಿತ ದಕ್ಷ ಆಡಳಿತ ನೀಡುತ್ತಿದೆ. ಬೆಳಗಾವಿಯಲ್ಲಿ ನಡೆದ ಒಂದೆರಡು ಘಟನೆಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ" ಎಂದು ತಿಳಿಸಿದ್ದಾರೆ.