ಗಾಜಿಯಾಬಾದ್, ಡಿ.26 (DaijiworldNews/PY): "2017ರಲ್ಲಿ ರಾಜ್ಯದ ಜನತೆ ವಿರೋಧ ಪಕ್ಷಗಳ ಮೈತ್ರಿಯನ್ನು ಒಪ್ಪಲಿಲ್ಲ. ಅದೇ ರೀತಿಯಾಗಿ ಮುಂಬರುವ ಚುನಾವಣೆಯಲ್ಲಿಯೂ ಸಹ ಜನರು ಅದನ್ನು ತಿರಸ್ಕರಿಸುತ್ತಾರೆ" ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಜನ ವಿಶ್ವಾಸ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಎಸ್ಪಿ ಕನ್ವರ್ ಯಾತ್ರೆಯನ್ನು ವಿರೋಧಿಸಿದರೆ, ಬಿಜೆಪಿ ಬೆಂಬಲಿಸುತ್ತದೆ. ಬಿಜೆಪಿ ಚುನಾವಣೆಯಲ್ಲಿ 325 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಸರ್ಕಾರದಡಿಯಲ್ಲಿ ಸಮಾಜದ ಯಾವುದೇ ವರ್ಗಳು ಹಿಂದುಳಿದಿಲ್ಲ. ಎಲ್ಲರಿಗೂ ಸರ್ಕಾರದ ಅಭಿವೃದ್ದಿ ಕಾರ್ಯಗಳು ತಲುಪಿವೆ" ಎಂದಿದ್ದಾರೆ.
"ತಮ್ಮ ಸರ್ಕಾರದಡಿ ಲ್ಯಾಂಡ್ ಮಾಫಿಯಾದಿಂದ ಭೂಮಿಯನ್ನು ಮುಕ್ತಗೊಳಿಸಲಾಗಿದೆ ಹಾಗೂ ಶಿಕ್ಷಣ ಮಾಫಿಯಾ ಕೂಡಾ ಇಲ್ಲದಂತಾಗಿದೆ" ಎಂದು ಹೇಳಿದ್ಧಾರೆ.
ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಅಂಗವಾಗಿ ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿರುವುದನ್ನು ಗುರಿಯಾಗಿಟ್ಟುಕೊಂಡು ಯೋಗಿ ಆದಿತ್ಯನಾಥ್ ಅವರು ವಾಗ್ದಾಳಿ ನಡೆಸಿದ್ದಾರೆ.