ಬೆಂಗಳೂರು, ಡಿ.26 (DaijiworldNews/PY): 15-18 ವರ್ಷದ ಮಕ್ಕಳಿಗೆ ಜನವರಿ 3ರಿಂದ ಕೊರೊನಾ ತಡೆ ಲಸಿಕೆ ಹಾಗೂ ದೇಶ ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ತೀರ್ಮಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ಕೋವಿಡ್ ವಿರುದ್ಧದ ಹೋರಾಟವನ್ನು ಸ್ವಾಗತಿಸುತ್ತೇನೆ. ಅವರ ದೂರದೃಷ್ಟಿ, ಪ್ರಯತ್ನ ಹಾಗೂ ನಿರ್ಣಯಗಳು ಕೋವಿಡ್ ವಿರುದ್ಧದ ಹೋರಾಟವನ್ನು ಯಶಸ್ವಿಗೊಳಿಸುತ್ತದೆ ಎಂಬ ಸಂಪೂರ್ಣವಾದ ನಂಬಿಕೆಯಿದೆ" ಎಂದು ತಿಳಿಸಿದ್ದಾರೆ.
"ಪ್ರಧಾನಿಯವರ ನಿರ್ಣಯ ಹಾಗೂ ಸಲಹೆಯನ್ನು ದೇಶ ಮತ್ತು ರಾಜ್ಯದ ಜನತೆ ಗಂಭೀರವಾಗಿ ಪರಿಗಣಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದೇ ಆದರೆ ಮಕ್ಕಳು, ಆರೋಗ್ಯ ಸೇವಾ ಕಾರ್ಯಕರ್ತರು, ವಯೋವೃದ್ಧರಿಗೆ ಬರುವಂತಹ ಕೋವಿಡ್ ಮಹಾಮಾರಿಯಿಂದ ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗುತ್ತದೆ" ಎಂದಿದ್ದಾರೆ.
"ಈ ನಿರ್ಧಾರ ಮಾಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ.