ಭೋಪಾಲ್, ಡಿ.26 (DaijiworldNews/PY): "ಈಗಾಗಲೇ ಹಿಂಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ" ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪಷ್ಟಪಡಿಸಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ದೂರದೃಷ್ಟಿಯಿಂದ ಕೃಷಿ ಕಾನೂನುಗಳನ್ನು ಜಾರಿಗೊಳಿಸಿತ್ತು. ಕಾರಣಾಂತರಗಳಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಕೇಂದ್ರ ಸರ್ಕಾರ, ರೈತರ ಕಲ್ಯಾಣಕ್ಕಾಗಿ ಸದಾ ಕ್ರಿಯಾಶೀಲವಾಗಿರುತ್ತದೆ" ಎಂದಿದ್ದಾರೆ.
ಕೆಲವು ರಾಜ್ಯಗಳಿಗೆ ಚುನಾವಣೆ ನಡೆಯುತ್ತಿದ್ದು, ಅದಾದ ಬಳಿಕ ತಿದ್ದುಪಡಿಯೊಂದಿಗೆ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಮತ್ತೆ ಜಾರಿಗೊಳಿಸಲಿದೆ ಎಂದು ಕಾಂಗ್ರೆಸ್ ದೂರಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತೋಮರ್, "ಕೃಷಿ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಮತ್ತೆ ತರುವುದಿಲ್ಲ" ಎಂದು ಹೇಳಿದ್ದಾರೆ.
"ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು. ಆದರೆ, ಅವುಗಳಿಗೆ ವಿರೋಧ ವ್ಯಕ್ತವಾಯಿತು. ಇದರಿಂದ ಸರ್ಕಾರ ಬೇಸರಗೊಂಡಿಲ್ಲ. ರೈತರು ಈ ದೇಶದ ಬೆನ್ನೆಲುಬು. ಈ ಬೆನ್ನೆಲುಬು ಗಟ್ಟಿಯಾದಲ್ಲಿ ದೇಶವೂ ಸಮರ್ಥವಾಗಿ ಮುನ್ನಡೆಯಲಿದೆ" ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸತತ ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸಿದ್ದರು. ರೈತರ ವಿರೋಧವನ್ನು ಅರಿತು ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು.