ಕಲಬುರಗಿ, ಡಿ.26 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿವೇಶನದ ಚರ್ಚೆಗಳಿಗಿಂತ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಮತಗಳನ್ನು ಕೊಡಿಸುವ ಬಗ್ಗೆಯೇ ಚಿಂತೆಯಾಗಿದೆ" ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಜೇವರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಧಿವೇಶನವನ್ನು ಹಿಂದಿನ ಯಾವ ಪ್ರಧಾನಿಯೂ ಸಹ ನಿರ್ಲಕ್ಷಿಸಿದ್ದನ್ನು ನಾನು ನೋಡಿಲ್ಲ. ಪ್ರಧಾನಿ ಮೋದಿ ಅವರಿಗೆ ಅಧಿವೇಶನದ ಚರ್ಚೆಗಳಿಗಿಂತ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಮತಗಳನ್ನು ಕೊಡಿಸುವುದೇ ಚಿಂತೆಯಾಗಿದೆ" ಎಂದು ಟೀಕಿಸಿದ್ದಾರೆ.
"ಪ್ರಧಾನಿ ಮೋದಿ ಅವರು ಸರ್ಕಾರಿ ಕಾರ್ಯಕ್ರಮವನ್ನು ವೈಯುಕ್ತಿಕ ಪ್ರಚಾರಕ್ಕೆ ಬಳಸಿಕೊಂಡರು. ಅಲ್ಲದೇ, ಪಕ್ಷದ ಕಾರ್ಯಕ್ರಮಕ್ಕೆಂದೇ ರೂಪಿಸಿದರು. ಮೊದಲ ದಿನ ಕಲಾಪಕ್ಕೆ ಬಂದು ಹೋದ ಪ್ರಧಾನಿ ಮೋದಿ ಅವರು ನಾಪತ್ತೆಯಾದರು" ಎಂದಿದ್ದಾರೆ.
"ಪ್ರಧಾನಿ ಮೋದಿ ಹಾಗೂ ಬಿಜೆಪಿಯವರು ಡಾ ಬಿ ಆರ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡು ಕೆಲಸದಲ್ಲಿ ತೊಡಗಿದ್ದಾರೆ. ಅಂಬೇಡ್ಕರ್ ಹಾಗೂ ನೆಹರೂ ಅವರು ಪ್ರಜಾಪ್ರಭುತ್ವದ ಭದ್ರ ಬುನಾದಿಯನ್ನು ಹಾಕಿದ್ದರು" ಎಂದು ತಿಳಿಸಿದ್ಧಾರೆ.