ಹೈದರಾಬಾದ್,ಡಿ. 25 (DaijiworldNews/HR): ಕೊರೊನಾ ಸೋಂಕು ದೃಢಪಟ್ಟ ಬಳಿಕ ಶ್ವಾಸಕೋಶದ ಕಾಯಿಲೆಗೆ ಒಳಗಾಗಿದ್ದ ಉತ್ತರಪ್ರದೇಶದ ಲಖನೌ ನಿವಾಸಿ 12 ವರ್ಷದ ಬಾಲಕ ಶೌರ್ಯ ಎಂಬಾತ 65 ದಿನಗಳ ಕಾಲ ಎಕ್ಸ್ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್(ಇಸಿಎಂಒ) ಲೈಫ್ ಸಪೋರ್ಟ್ನಲ್ಲಿ ಇರಿಸಲಾಗಿದ್ದು, ಇದೀಗ ಸಾವು ಗೆದ್ದು ಬಂದಿದ್ದಾನೆ.
ಬಾಲಕನಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮೊದಲಿಗೆ ತಿಳಿದಿರಲಿಲ್ಲ. ವೈರಲ್ ನ್ಯುಮೋನಿಯಾ ಎಂದು ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ವೇಳೆ ಬಾಲಕನಿಗೆ ಗಂಭೀರ ಶ್ವಾಸಕೋಶದ ಕಾಯಿಲೆ ಇರುವುದು ಕಂಡುಬಂದಿದ್ದು, 65 ದಿನಗಳ ಕಾಲ ಲೈಫ್ ಸಪೋರ್ಟ್ ಸಿಸ್ಟಂನಲ್ಲಿ ಇದ್ದು, ಅಚ್ಚರಿ ಎಂಬಂತೆ ಶ್ವಾಸಕೋಶದ ಕಸಿ ಮಾಡದೇ ಗುಣಮುಖರಾಗಿದ್ದಾರೆ.
ಈ ರೀತಿಯಾಗಿ ಶ್ವಾಸಕೋಶದ ಕಸಿ ಮಾಡದೇ ಗುಣಮುಖರಾಗಿರುವುದು ಭಾರತ ಮತ್ತು ಏಷ್ಯಾದಲ್ಲಿ ಇದು ಮೊದಲ ಪ್ರಕರಣ ಎನ್ನಲಾಗಿದೆ.
ಇನ್ನು ವೈದ್ಯರು ಮೊದಲಿಗೆ ಶ್ವಾಸಕೋಶ ಕಸಿ ಮಾಡುವಂತೆ ಪೋಷಕರಿಗೆ ಸಲಹೆ ನೀಡಿದ್ದು, ಪೋಷಕರು ಹೆಲಿಲಿಫ್ಟ್ ಮಾಡಿ ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ಕರೆತಂದರು. ಅಲ್ಲಿ ತಕ್ಷಣ ಕ್ಸಿಮ್ಸ್ ಹೃದಯ-ಶ್ವಾಸಕೋಶ ಕಸಿ ಸಂಸ್ಥೆಯ ವೈದ್ಯ ಸಂದೀಪ್ ಅತ್ತಾವರ ಚಿಕಿತ್ಸೆ ಆರಂಭಿಸಿದರು. ರೋಗಿಯ ನಮ್ಮ ಬಳಿಗೆ ಬಂದಾಗಬಾಲಕನ ಶ್ವಾಸಕೋಶಗಳು ನಿತ್ರಾಣಗೊಂಡಿದ್ದವು. ಬಳಿಕ ದೇಹಕ್ಕೆ ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಇಸಿಎಂಒ ಬೆಂಬಲದೊಂದಿಗೆ ಆತನ ಶ್ವಾಸಕೋಶಗಳಿಗೆ ವಿಶ್ರಾಂತಿ ನೀಡಲಾಯಿತು ಎಂದು ಕೀಮ್ಸ್ ಹೃದಯ ಮತ್ತು ಶ್ವಾಸಕೋಶದ ಸಂಸ್ಥೆಯ ಕಸಿ ಪಲ್ಮನಾಲಜಿ ಮುಖ್ಯಸ್ಥ ಡಾ. ವಿಜಿಲ್ ತಿಳಿಸಿದ್ದಾರೆ.
ಇಸಿಎಂಒ ಲೈಫ್ ಸಪೋರ್ಟ್ನಲ್ಲಿ 65 ದಿನಗಳ ನಂತರ ಶೌರ್ಯ ಚೇತರಿಸಿಕೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.