ಹಾಸನ, ಡಿ.25 (DaijiworldNews/PY): ಮೇಕೆದಾಟು ಪಾದಯಾತ್ರೆ ಬಗ್ಗೆ ಟೀಕೆ ಮಾಡಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, "ಕುಮಾರಸ್ವಾಮಿ ಅವರು ದೊಡ್ಡವರು. ಅವರು ಯಾವಾಗ ಎಲ್ಲೆಲ್ಲಿ ಹೋರಾಟ ನಡೆಸಿದ್ದಾರೋ ಎನ್ನುವುದು ನನಗೆ ತಿಳಿದಿಲ್ಲ" ಎಂದು ಲೇವಡಿ ಮಾಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಮುಂದಾಳತ್ವ ವಹಿಸಿದ್ದರೂ ಸಹ ಇದೊಂದು ಪಕ್ಷಾತೀತವಾದ ಹೋರಾಟ. ಈ ಹೋರಾಟವನ್ನು ನಾನೇ ಮಾಡಬೇಕು ಎಂದುಕೊಂಡಿದ್ದೆ ಎಂದು ಹೆಚ್ಡಿಕೆ ಅವರು ಸದನದಲ್ಲೇ ಹೇಳಿದ್ದರು. ಹಾಗಾಗಿ, ಅವರು ನಮ್ಮ ಹೋರಾಟಕ್ಕೆ ತಕರಾರು ಎತ್ತುವುದಿಲ್ಲ ಎಂದು ಭಾವಿಸಿದ್ದೇನೆ" ಎಂದಿದ್ಧಾರೆ.
"ಸುಗ್ರೀವಾಜ್ಞೆಯ ಮೂಲಕ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನಾವು ಈಗಾಗಲೇ ಸದನದಲ್ಲಿ ವಿರೋಧ ವ್ಯಕ್ತಪಡಿಸಿದ್ದೇವೆ. ಅವರಿಗೆ ವಿಧಾನ ಪರಿಷತ್ತಿನಲ್ಲಿ ಬಹುಮತವಿಲ್ಲ. ಜ.5ರ ಬಳಿಕ ಬಹುಮತ ಲಭಿಸುತ್ತದೆ. ಆಗ ಮಂಡನೆ ಮಾಡಬಹುದು" ಎಂದು ತಿಳಿಸಿದ್ದಾರೆ.
"ನನ್ನ ಅಧ್ಯಕ್ಷ ಅವಧಿಯಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ. ನಮ್ಮದು ಪಕ್ಷಪೂಜೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಲೆ ಬೀಸುತ್ತಿದೆ. ಎಲ್ಲಾ ಕಡೆಯಲ್ಲೂ ಸಹ ಕಾಂಗ್ರೆಸ್ ಗೆಲ್ಲಿಸಿ ಎಂದ ಪ್ರಚಾರ ಮಾಡುತ್ತೇವೆ" ಎಂದು ಹೇಳಿದ್ದಾರೆ.