ಹುಬ್ಬಳ್ಳಿ, ಡಿ.25 (DaijiworldNews/PY): "ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ರೀತಿಯಾದ ಚರ್ಚೆಯಾಗಿಲ್ಲ. ಈ ಬಗ್ಗೆ ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ಧಾರೆ" ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಶನಿವಾರ ನಗರದ ಹೆಗ್ಗೇರಿಯ ರುದ್ರಭೂಮಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರು ಏನೇ ಮಾಡಿದರೂ ಅದಕ್ಕೆ ಕಾಂಗ್ರೆಸ್ಸಿಗರ ವಿರೋಧ ಇದ್ದೇ ಇರುತ್ತದೆ. ಕಾಂಗ್ರೆಸ್ಸಿಗರಲ್ಲಿ ಮೋದಿ ಫೋಬಿಯಾ ಶುರುವಾಗಿದೆ" ಎಂದಿದ್ದಾರೆ.
"ಬಿಜೆಪಿಗೆ ಆಡಳಿತ ನಡೆಸುವುದಕ್ಕೆ ಜನರೇ ನೀಡಿದ ಜನಾದೇಶವನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿಲ್ಲ. ನಾವು ಜನರ ಪರವಾಗಿಯೇ ಆಡಳಿತ ನಡೆಸುತ್ತಾ, ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಆದರೆ, ತಮ್ಮ ಹಕ್ಕುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಿತ್ತುಕೊಳ್ಳುತ್ತಾರೆ ಎನ್ನುವ ಮಾನಸಿಕ ಸಿನಿಕತೆ ಅವರಲ್ಲಿ ಮನೆ ಮಾಡಿದೆ" ಎಂದು ದೂರಿದ್ದಾರೆ.
"ವಿಧಾನ ಪರಿಷತ್ನಲ್ಲಿ ಬಹುಮತ ಇಲ್ಲದ ಕಾರಣ ಮತಾಂತರ ನಿಷೇಧ ಕಾಯ್ದೆ ಮಂಡನೆ ಆಗಿಲ್ಲ. ಮುಂಬರುವ ದಿನಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಯಾಗಲಿದೆ" ಎಂದು ತಿಳಿಸಿದ್ದಾರೆ.