ಚಿಕ್ಕಮಗಳೂರು, ಡಿ.25 (DaijiworldNews/PY): "ಓದು, ಬರಹ ಬಾರದ ಹೆಬ್ಬೆಟ್ಟಿನ ಜನ ಸಹ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಹಾಕುತ್ತಾರೆ. ಅವರಿಗಾದರೂ ಸ್ವಲ್ಪ ತಿಳುವಳಿಕೆ ಇರುತ್ತದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿ ಟಿ ರವಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, "ಇವರದ್ದು ಕೇವಲ ನಾಟಕ. 2016ರಲ್ಲಿ ಮತಾಂತರ ಡ್ರಾಮಾಗೆ ಸಹಿ ಹಾಕಿ, ನಾನು ಸಹಿ ಹಾಕಿಲ್ಲ ಎನ್ನುತ್ತಾರೆ. ಬಳಿಕ ತೋರಿಸಿ ಎನ್ನುತ್ತಾರೆ. ತೋರಿಸಿದ ಬಳಿಕ ತಿಳಿಯದೇ ಸಹಿ ಹಾಕಿದ್ದೇನೆ ಎಂದು ಹೇಳುತ್ತಾರೆ. ಇದು ಇವರ ರಾಜಕೀಯ ನಾಟಕ. ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ" ಎಂದು ಲೇವಡಿ ಮಾಡಿದ್ದಾರೆ.
"ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸೋನಿಯಾ ಗಾಂಧಿ, ಪರಮೇಶ್ವರ್ ಯಾರ ನಾಯಕತ್ವದಲ್ಲಿ ಬೇಕಾದರೂ ಎಲೆಕ್ಷನ್ ಮಾಡಲಿ. ಅವರು ಅಧಿಕಾರಕ್ಕೆ ಬರುವುದಿಲ್ಲ" ಎಂದಿದ್ದಾರೆ.
"ಕಾಂಗ್ರೆಸ್ನ ನಿಲುವು ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿವೆ. ಅವರ ತತ್ವ-ನಿಲುವುಗಳು ಜನಹಿತಕ್ಕೆ ಮಾರಕವಾಗಿದ್ದು, ಅದಕ್ಕೆ ಕಾಂಗ್ರೆಸ್ ಸೋಲುತ್ತಿದೆ. ಅವರದ್ದು ಓಲೈಕೆ ನೀತಿಯಾಗಿರುವ ಕಾರಣ ಅವರು ವಿಫಲರಾಗುತ್ತಾರೆ" ಎಂದು ಹೇಳಿದ್ದಾರೆ.