ಹುಬ್ಬಳ್ಳಿ, ಡಿ. 25 (DaijiworldNews/HR): ಒಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ, ಮುಂಜಾಗ್ರತಾ ಕ್ರಮಗಳ ಬಗ್ಗೆ ಭಾನುವಾರ ಬೆಂಗಳೂರಿನಲ್ಲಿ ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಒಮಿಕ್ರಾನ್ ವಿಚಾರದಲ್ಲಿ ಮಹಾರಾಷ್ಟ್ರ, ಕೇರಳದಿಂದ ಹೆಚ್ಚು ಆತಂತವಿತ್ತು. ಆದರೆ ಇದೀಗ ತಮಿಳುನಾಡಿನಲ್ಲಿಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಕ್ರಮ, ಹೊಸ ವರ್ಷಾಚರಣೆ ಬಗ್ಗೆಯೂ ಚರ್ಚಿಸಲಾಗುವುದು" ಎಂದರು.
ಇನ್ನು ವಿಧಾನಪರಿಷತ್ತಿನಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ವಿಚಾರದಲ್ಲಿ ಸರಕಾರಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. "ನಮ್ಮ ಪಕ್ಷದ ಮೂರ್ನಾಲ್ಕು ಸದಸ್ಯರು ಅಧಿವೇಶನಕ್ಕೆ ಗೈರಾಗಿದ್ದರು. ಅವರು ಅಧಿವೇಶನಕ್ಕೆ ಬಂದಿದ್ದರೆ ಮತಾಂತರ ನಿಷೇಧ ಮಸೂದೆ ಪಾಸ್ ಮಾಡಿಸುವ ಆಲೋಚನೆ ನಮ್ಮದಾಗಿತ್ತು. ಅವರನ್ನು ಕರೆತರಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ನ್ಯಾಯಸಮ್ಮತವಾಗಿ ಮುಂದಿನ ಅಧಿವೇಶನದ ವೇಳೆ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ತೀರ್ಮಾನಿಸಿದ್ದೇವೆ" ಎಂದು ಹೇಳಿದ್ದಾರೆ.