ಬೆಂಗಳೂರು, ಡಿ. 25 (DaijiworldNews/HR): ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಮತ್ತೆ ಕೇಳಿಬರುತ್ತಿದ್ದು, ಇದೊಂದು ಕಪೋಲಕಲ್ಪಿತ ಸುದ್ದಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. 2023ರ ಚುನಾವಣೆವರೆಗೆ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಕಾಂಗ್ರೆಸ್ನವರೇ ಇಂತಹ ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದರು.
ಇನ್ನು "ಕಾಂಗ್ರೆಸ್ನವರೇ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಜನರಲ್ಲಿ ಗೊಂದಲ ಮೂಡಿಸುವ ದುರುದ್ದೇಶ ವಿಪಕ್ಷ ನಾಯಕರದ್ದಾಗಿದೆ. ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವ ಇರುತ್ತದೆ. ಇನ್ನು ಸಚಿವ ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟದ್ದು, ಪುನಾರಚನೆಯಾದರೆ ನಮ್ಮ ಜತೆ ಚರ್ಚಿಸುತ್ತಾರೆ" ಎಂದು ಹೇಳಿದ್ದಾರೆ.