ಹುಬ್ಬಳ್ಳಿ, ಡಿ.25 (DaijiworldNews/PY): "ಮತಾಂತರ ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ. ನಮಗೆ ವಿಧಾನಪರಿಷತ್ನಲ್ಲಿ ಬೆಂಬಲವಿಲ್ಲ. ಹಾಗಾಗಿ, ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಿಲ್ಲ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಪಕ್ಷದ ಮೂರ್ನಾಲ್ಕು ಸದಸ್ಯರು ಅಧಿವೇಶನಕ್ಕೆ ಗೈರಾಗಿದ್ದರು. ಅವರು ಅಧಿವೇಶನಕ್ಕೆ ಬಂದಿದ್ದರೆ ಮತಾಂತರ ನಿಷೇಧ ಮಸೂದೆ ಪಾಸ್ ಮಾಡಿಸುವ ಆಲೋಚನೆ ನಮ್ಮದಾಗಿತ್ತು. ಅವರನ್ನು ಕರೆತರಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ನ್ಯಾಯಸಮ್ಮತವಾಗಿ ಮುಂದಿನ ಅಧಿವೇಶನದ ವೇಳೆ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ತೀರ್ಮಾನಿಸಿದ್ದೇವೆ" ಎಂದು ಹೇಳಿದ್ಧಾರೆ.
"ಪ್ರತಿಪಕ್ಷದವರು ಹೀಗೆಯೇ ಆಗಬೇಕು ಎನ್ನುವ ಹಠದ ಧೋರಣೆಯಿಂದ ಸಭಾಪತಿ ಸ್ಥಾನದ ಘನತೆ ಮರೆತು, ಬಸವರಾಜ ಹೊರಟ್ಟಿ ಅವರೊಂದಿಗೆ ಮಿತಿಮೀರಿ ವರ್ತಿಸಿದ್ದಾರೆ. ಇದರಿಂದ ಹೊರಟ್ಟಿ ಅವರಿಗೆ ನೋವಾಗಿದ್ದು, ಅವರು ರಾಜೀನಾಮೆಗೂ ಮುಂದಾದರು. ಅವರನ್ನು ನಾನು ಸಮಾಧಾನಪಡಿಸಿದೆ. ಸದನದ ಸಮಯ ಎಲ್ಲರದ್ದೂ ಎಂದುಕೊಂಡು ನಡೆದುಕೊಂಡರೆ ಈ ರೀತಿಯಾದ ಘಟನೆಗಳು ನಡೆಯುವುದಿಲ್ಲ" ಎಂದಿದ್ದಾರೆ.
ಒಮೈಕ್ರಾನ್ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ದೇಶದಲ್ಲಿ ಒಮೈಕ್ರಾನ್ ಹೆಚ್ಚಾಗುತ್ತಿದೆ. ಕೇರಳ, ತಮಿಳುನಾಡು ಸೇರಿದಂತೆ ಮಹಾರಾಷ್ಟ್ರದಲ್ಲಿ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ರಾಜ್ಯದ ಆತಂಕ ಹೆಚ್ಚಿಸಿದೆ. ಒಮೈಕ್ರಾನ್ ತಡೆಗೆ ಈಗ ಕೈಗೊಂಡಿರುವ ಕ್ರಮಗಳೊಂದಿಗೆ ಮತ್ತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.