ಜಮ್ಮು, ಡಿ.25 (DaijiworldNews/PY): ಭಾರತೀಯ ಸೇನಾಪಡೆ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ಧಾರೆ ಎಂದು ತಿಳಿದುಬಂದಿದೆ.
ಹತ್ಯೆಯಾದ ಇಬ್ಬರು ಉಗ್ರರು ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಶೋಪಿಯಾನ್ ಜಿಲ್ಲೆಯ ಚೌಗಾಮ್ ಎನ್ನುವ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ತಿಳಿದ ಹಿನ್ನೆಲೆ ಭದ್ರತಾ ಪಡೆಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ ಸೇನಾಪಡೆಗಳ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ.
ಭದ್ರತಾ ಪಡೆಗಳು, ಉಗ್ರರು ಗುಂಡಿನ ದಾಳಿ ನಡೆಸಿದ ಸ್ಥಳದಲ್ಲಿ ಸುತ್ತುವರೆದು ಎನ್ಕೌಂಟರ್ ನಡೆಸಲು ಆರಂಭಿಸಿದ್ದು, ಇಬ್ಬರು ಉಗ್ರರನ್ನು ಸದೆಬಡೆದಿದ್ದಾರೆ.
"ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಸ್ಥಳದಲ್ಲಿದ್ದ ಶಸ್ತ್ರಾಸ್ತ್ರಗಳು ಹಾಗೂ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.