ನವದೆಹಲಿ, ಡಿ.25 (DaijiworldNews/PY): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಜನ್ಮ ದಿನಾಚರಣೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಪ್ರಮುಖ ಗಣ್ಯರು ವಾಜಪೇಯಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ದೆಹಲಿಯ ರಾಜ್ಘಾಟ್ನಲ್ಲಿ ಸದೈವ ಅಟಲ್ ಸ್ಮಾರಕದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ವಾಜಪೇಯಿ ಅವರ 97ನೇ ಜಯಂತಿಯ ಹಿನ್ನೆಲೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಗೌರವಾನ್ವಿತ ಅಟಲ್ ಜೀ ಅವರ ಜನ್ಮದಿನದಂದು ಅವರಿಗೆ ನಮನಗಳು. ಅಟಲ್ ಜೀ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇವೆ. ದೇಶಕ್ಕೆ ಅವರ ಸೇವೆಯಿಂದ ನಾವು ಸ್ಪೂರ್ತಿ ಪಡೆದಿದ್ದೇವೆ. ಭಾರತವನ್ನು ಬಲಿಷ್ಠ ಹಾಗೂ ಅಭಿವೃದ್ದಿಗೊಳಿಸಲು ವಾಜಪೇಯಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಅಭಿವೃದ್ದಿಯ ಕ್ರಮಗಳು ಲಕ್ಷಾಂತರ ಭಾರತೀಯರ ಮೇಲೆ ಧನಾತ್ಮಕವಾದ ಪರಿಣಾಮ ಬೀರಿದೆ" ಎಂದಿದ್ಧಾರೆ.