ಲೂಧಿಯಾನ, ಡಿ 24 (DaijiworldNews/MS): ಪಂಜಾಬ್ನ ಲೂಧಿಯಾನದ ನ್ಯಾಯಾಲಯದಲ್ಲಿ ನಡೆದ ಬಾಂಬ್ ದಾಳಿ ನಡೆಸಿ ಮೃತಪಟ್ಟ ವ್ಯಕ್ತಿಯನ್ನು ಗುರುತು ಪತ್ತೆ ಹಚ್ಚಲಾಗಿದೆ. ಈತನನ್ನು ಮಾಜಿ ಪೊಲೀಸ್ ಅಧಿಕಾರಿ ಗಗನ್ ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತನೇ ಬಾಂಬರ್ ಎಂದು ಶಂಕಿಸಲಾಗಿದೆ.
ಹೆಡ್ ಕಾನ್ಸ್ಟೆಬಲ್ ಆಗಿದ್ದ ಗಗನ್ ದೀಪ್ ಸಿಂಗ್ ನನ್ನು 2019 ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ. ಅವರನ್ನು ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಆತನ ಸಿಮ್ ಕಾರ್ಡ್ ಮತ್ತು ವೈರ್ಲೆಸ್ ಡಾಂಗಲ್ ಸಹಾಯದಿಂದ ಆತನನ್ನು ಗುರುತಿಸಲು ಸಹಾಯ ಮಾಡಿತು ಮತ್ತು ಮೃತದೇಹ ಸಿಂಗ್ ಅವರದೇ ಎಂದು ಕುಟುಂಬದವರು ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಫೋಟದಲ್ಲಿ ಪಾಕಿಸ್ತಾನಿ ಏಜೆನ್ಸಿಗಳು ಅಥವಾ ಖಲಿಸ್ತಾನಿ ಗುಂಪುಗಳು ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಈ ಸ್ಪೋಟಕ್ಕೂ ಮಾಜಿ ಸಚಿವ ಬಿಕ್ರಮ್ ಮಜಿಥಿಯಾ ಹೆಸರಿಸಲಾದ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿದೆ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಹೇಳಿಕೆಯನ್ನು ಪುಷ್ಟೀಕರಿಸಿದಂತಿದೆ.
ಬಾಂಬ್ ದಾಳಿಯ ಬಳಿಕ , "ಮೊಹಾಲಿಯಲ್ಲಿ ಮಜಿಥಿಯಾ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಲುಧಿಯಾನದ ಕೋರ್ಟ್ ನಲ್ಲಿ ಸ್ಫೋಟ ಸಂಭವಿಸಿದೆ. ಈ ಲಿಂಕ್ ಇರುವ ಸಾಧ್ಯತೆ ಇದೆ ಈ ಬಗ್ಗೆ ತನಿಖೆಯ ಅಗತ್ಯವಿದೆ " ಎಂದು ಮುಖ್ಯಮಂತ್ರಿ ಚನ್ನಿ ಹೇಳಿಕೆ ನೀಡಿದ್ದರು.