ಬಿಡದಿ, ಡಿ. 24 (DaijiworldNews/HR): ಕಾಂಗ್ರೆಸ್ ನಾಯಕರು ಮೇಕೆದಾಟು ಹೆಸರು ಹೇಳಿಕೊಂಡು ಹಮ್ಮಿಕೊಂಡಿರುವ ಪಾದಯಾತ್ರೆ ನೀರಿಗಾಗಿ ಮಾಡುತ್ತಿರುವ ಪಾದಯಾತ್ರೆಯಲ್ಲ, ಅದು ಮತಕ್ಕಾಗಿ ಮಾಡುತ್ತಿರುವ ಯಾತ್ರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಹೆಚ್.ಡಿ.ದೇವೇಗೌಡರು ರಾಜ್ಯದ ನೀರಾವರಿಗೆ ನೀಡಿದ ಕೊಡುಗೆ ಬಗ್ಗೆ ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕು. 1996ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಸಂದರ್ಭದಲ್ಲೇ ಮೇಕೆದಾಟು ಯೋಜನೆ ಬಗ್ಗೆ ನೀಲನಕ್ಷೆ ರೂಪಿಸಲಾಗಿತ್ತು. ಮೇಕೆದಾಟು ಯೋಜನೆ ಕಾಂಗ್ರೆಸ್ ಕೊಡುಗೆ ಅಲ್ಲ" ಎಂದರು.
ಇನ್ನು ರಾಮನಗರ ಜಿಲ್ಲೆಯ ಮಾಜಿ ಶಾಸಕರೊಬ್ಬರು ನಮ್ಮ ಪಕ್ಷ ಮುಳುಗುವ ಹಡಗು ಎಂದು ಹೇಳಿಕೊಂಡಿದ್ದು, ಪಾಪ, ಅವರಿಗೆ ನಮ್ಮ ಬಗ್ಗೆ ಯಾಕೆ ಚಿಂತೆ? ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಬದಲು ಕಳೆದ ಚುನಾವಣೆಯಲ್ಲಿ ಆದ ಗತಿಯನ್ನು ಆತ್ಮಾಲೋಕನ ಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣಗೆ ಟಾಂಗ್ ನೀಡಿದ್ದಾರೆ.