ಬೆಳಗಾವಿ, ಡಿ.24 (DaijiworldNews/PY): "ವಿಧಾನಸಭೆಯಲ್ಲಿ ಬಹುಮತದ ಆಧಾರದಲ್ಲಿ ಮಸೂದೆ ಅಂಗೀಕಾರ ಆಗಿದೆ. ಆದರೆ, ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಮತಾಂತರ ನಿಷೇಧ ಮಸೂದೆ ಮಂಡನೆಗೆ ಮೀನಾಮೇಷ ಎಣಿಸುತ್ತಿದೆ. ಜನವರಿಯಲ್ಲಿ ಮಸೂದೆ ಮಂಡಿಸಲಾಗುವುದು" ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ಧಾರೆ.
"ಮಸೂದೆಯನ್ನು ಇಂದು ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಕೊನೆ ಘಳಿಗೆಯಲ್ಲಿ ನಿಲುವು ಬದಲಿಸಲಾಗಿದ್ದು, ಜನವರಿಯಲ್ಲಿ ಮಸೂದೆಯನ್ನು ಮಂಡಿಸಲಾಗುವುದು" ಎಂದಿದ್ಧಾರೆ.
ಇಂದು ಕಲಾಪದಲ್ಲಿ ಬಿಜೆಪಿಯ 30 ಸದಸ್ಯರು, ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ 26 ಸದಸ್ಯರು ಉಪಸ್ಥಿತರಿದ್ದರು. ಮತಾಂತರ ನಿಷೇಧ ಮಸೂದೆ ಮಂಡನೆಯ ಬಗ್ಗೆ ಇಂದು ಪರಿಷತ್ನಲ್ಲಿ ಹೈಡ್ರಾಮಾ ನಡೆಯಿತು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು.
ಈ ಸಂದರ್ಭ ಮಾತನಾಡಿದ ಮರಿತಿಬ್ಬೇಗೌಡ, ನಾಳೆ ಬಿಲ್ ಮಂಡಿಸಿ. ಇಂದೇ ಮಂಡಿಸಬೇಕಾಗಿಲ್ಲ. ನಮ್ಮ ಕೆಲ ಸದಸ್ಯರು ಬರುವವರಿದ್ಧಾರೆ. ಅವಧಿ ಮುಗಿದವರ ವಿದಾಯಕಕ್ಕೆ ನಾಳೆಯೇ ಅವಕಾಶ ನೀಡಿ. ಕಲಾಪ ನಾಳೆಗೆ ಮುಂದೂಡುವಂತೆ ಮನವಿ ಮಾಡಿದರು. ಮಸೂದೆ ಮಂಡನೆ ವಿಚಾರವಾಗಿ ಗೊಂದಲ ಇದ್ದ ಕಾರಣ ಕಲಾಪ ಮುಂದೂಡಲಾಯಿತು.