ಬೆಳಗಾವಿ, ಡಿ.24 (DaijiworldNews/PY): "ಸುವರ್ಣಸೌಧದಲ್ಲಿ ಚರ್ಚೆ ಮಾಡುವುದಿದ್ದಲ್ಲಿ ಮಾತ್ರವೇ ಕರೆಯಿರಿ. ಜಾತ್ರೆ ಮಾಡಲು ಈ ರೀತಿಯಾದ ಅಧಿವೇಶನವನ್ನು ಕರೆಯಬೇಡಿ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಸುವರ್ಣಸೌಧ ಕೇವಲ 10-15 ದಿನಗಳ ಅಧಿವೇಶನಕ್ಕೆ ಮಾತ್ರವೇ ಸೀಮಿತವಾಗಿದೆ. ಇಲ್ಲಿ ಇಲಾಖೆಗಳು ಬರಬೇಕು ಸುವರ್ಣ ಸೌಧದ ಪ್ರಯೋಜನ ಪಡೆಯುವಂತಾಗಬೇಕು. ಸದನ ಜಾತ್ರೆಯಾಗಬಾರದು" ಎಂದು ಹೇಳಿದ್ದಾರೆ.
"ಉತ್ತರ ಕರ್ನಾಟಕದ ಬಗೆಗಿನ ಚರ್ಚೆಗೆ ಕಾಂಗ್ರೆಸ್ಸಿಗರು ಸಹಕಾರ ನೀಡಲಿಲ್ಲ. ಆರಂಭದ ದಿನಗಳಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಕೊನೆಯ ಎರಡು ದಿನ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆ ಇಟ್ಟುಕೊಂಡಿದ್ದು ಸರಿಯಲ್ಲ. ಈ ಭಾಗದ ಸಮಸ್ಯೆಗಳ ಬಗ್ಗೆ ಮೊದಲ ಐದು ದಿನ ಚರ್ಚೆಗೆ ಮೀಸಲಿಡಿ ಎಂದು ಹೇಳಬೇಕಿತ್ತು" ಎಂದಿದ್ಧಾರೆ.
"ಸುವರ್ಣ ಸೌಧ ಗೋಲ್ ಗುಂಬಜ್ ರೀತಿ ಒಂದ ಪ್ರವಾಸಿ ತಾಣವಾಗಲಿದೆ ಅಷ್ಟೇ. ಇಲ್ಲಿ ಮುಂದಿನ ದಿನಗಳಲ್ಲಿ ಅಧಿವೇಶನ ನಡೆಸುವುದಾದರೆ ಉತ್ತರ ಕರ್ನಾಟಕದ ಕುರಿತು ಚರ್ಚೆಗೆ ಮೊದಲ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ, ಅಧಿವೇಶನ ನಡೆಸಲು ನಾವು ಬಿಡುವುದಿಲ್ಲ, ಪ್ರತಿಭಟನೆ ಮಾಡುತ್ತೇವೆ" ಎಂದು ಹೇಳಿದ್ಧಾರೆ.