ಬೆಳಗಾವಿ, ಡಿ.24 (DaijiworldNews/PY): "ಕಲ್ಯಾಣ ಕರ್ನಾಟಕ ಹೆಸರು ಬಿಟ್ಟರೆ ಬೇರೆ ಯಾವುದೇ ರೀತಿಯಾದ ಅಭಿವೃದ್ಧಿಯಾಗಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, "ಹೈದರಾಬಾದ್ ಕರ್ನಾಟಕವಮ್ಮು ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದ್ದನ್ನು ಬಿಟ್ಟರೆ ಬೇರೆನೂ ಮಾಡಿಲ್ಲ ಎಂದು ಸರ್ಕಾರ ಕಲ್ಯಾಣ ಕರ್ನಾಟಕವನ್ನು ಮರೆತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಅಧ್ಯಕ್ಷರನ್ನು ಮಾತ್ರ ನೇಮಕ ಮಾಡಿರುವುದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಮಂಡಳಿ ಸದಸ್ಯರ ನೇಮಕವಾಗಿಲ್ಲ" ಎಂದಿದ್ದಾರೆ.
"ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದರು. ಆದರೆ, ಈಗ 378 ಕೋಟಿ ರೂ. ಮಾತ್ರವೇ ಬಿಡುಗಡೆಯಾಗಿದೆ. ಹೆಚ್ಚೆಂದರೆ ಇನ್ನೊಂದು 200 ಕೋಟಿ ರೂ. ಖರ್ಚಾಗಬಹುದು. ಈ ರೀತಿಯಾದಲ್ಲಿ ಅಭಿವೃದ್ಧಿ ಹೇಗಾಗುತ್ತದೆ?" ಎಂದು ಪ್ರಶ್ನಿಸಿದ್ದಾರೆ.
"ಅಭಿವೃದ್ದಿಯ ವೈಫಲ್ಯದ ಬಗ್ಗೆ ನಾವು ಪ್ರಸ್ತಾಪಿಸುತ್ತೇವೆ ಎನ್ನುವ ಕಾರಣಕ್ಕೆ ಚರ್ಚೆ ಮಾಡಲು ಸಮಯ ನೀಡುತ್ತಿಲ್ಲ. ಮತಾಂತರ ನಿಷೇಧ ಕಾಯ್ದೆ ತಂದು ಜನರ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ" ಎಂದು ದೂರಿದ್ಧಾರೆ.