ಬೆಂಗಳೂರು, ಡಿ 24 (DaijiworldNews/MS): ಗೊಬೆಲ್ ಆಗಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರಿಗೆ "ನೊಬೆಲ್ "ಪಾರಿತೋಷಕ ನೀಡಬೇಕು ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕವು, " ಸುಳ್ಳು ಹೇಳುವುದಕ್ಕಾಗಿ "ನೊಬೆಲ್ "ಪಾರಿತೋಷಕ ನೀಡುವುದಾದರೆ ಅದನ್ನು ಸಿದ್ದರಾಮಯ್ಯ ಅವರಿಗೆ ನೀಡಬೇಕು. ಅವರಿವರಿಗೆ "ಗೊಬೆಲ್ಸ್ ಥಿಯರಿ" ಪ್ರತಿಪಾದಕರು ಎಂದು ನೀವು ಆರೋಪಿಸುತ್ತಿದ್ದಿರಿ. ಆದರೆ ನೀವೇ ಈಗ ದೊಡ್ಡ ಗೊಬೆಲ್ ಆಗಿದ್ದೀರಿ. ಸುಳ್ಳೇ ನಿಮ್ಮ ಮನೆ ದೇವರಾ?" ಎಂದು ಬಿಜೆಪಿ ಕುಹಕವಾಡಿದೆ.
"ಸಿದ್ದರಾಮಯ್ಯನವರೇ, ದಲಿತ ನಾಯಕತ್ವದ ವಿಚಾರದಲ್ಲಿ ನೀವು ಹೇಳಿದ ಸಂಗತಿಗಳನ್ನು ನೆನಪು ಮಾಡಿಕೊಡಬೇಕೇ? ನಾನೇ ದಲಿತ, ಮತ್ತೇಕೆ ದಲಿತ ಸಿಎಂ ಎಂದು ನೀವು ಹೇಳಿದ ಮಾತೇ ಅತಿದೊಡ್ಡ ಸುಳ್ಳು. ಆ ಸುಳ್ಳು ಹೇಳುತ್ತಲೇ ಕಾಂಗ್ರೆಸ್ ಪಕ್ಷದ ಎಲ್ಲಾ ದಲಿತ ನಾಯಕರನ್ನು ಮೂಲೆಗುಂಪು ಮಾಡಿಬಿಟ್ಟಿರಿ" ಎಂದು ವ್ಯಂಗ್ಯವಾಡಿದೆ.
ಮತ್ತೊಂದು ಟ್ವೀಟ್ ನಲ್ಲಿ "ಮತಾಂತರ ನಿಷೇಧ ಕರಡು ಮಸೂದೆಗೆ ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ ನಿಮ್ಮ ಹೇಳಿಕೆಯ ಹಿಂದಿನ ಮರ್ಮವೇನು? ನಿಮಗೆ ಸಹಿ ಮಾಡುವಂತೆ ಒತ್ತಾಯಿಸಿದ್ದು ಯಾರು?ಕದ್ದುಮುಚ್ಚಿ ಕಾಯ್ದೆ ತಂದಿದ್ದೀರಿ ಎಂದು ಆರೋಪಿಸುವ ನೀವು ಕಣ್ಣುಮುಚ್ಚಿ ಸಹಿ ಹಾಕಿದ್ದೇಕೆ? ಅಂದು ಮತಾಂತರ ನಿಯಂತ್ರಣ ಕರಡು ಮಸೂದೆಗೆ ಸಹಿ ಮಾಡಿ, ಇಂದು ಈಗ ಸದನದ ಒಳಗೂ, ಹೊರಗೂ ಹೋರಾಟ ಮಾಡುತ್ತೇವೆ ಎಂದು ನಾಟಕ ಮಾಡುತ್ತೀರಿ.ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡುವ ನಿಮ್ಮ ಆಟ ಬಯಲಾಗಿದೆ " ಎಂದು ಲೇವಡಿ ಮಾಡಿದೆ.