ಕೋಲ್ಕತ್ತಾ, ಡಿ 24 (DaijiworldNews/MS): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರತಾ ಸಿಬ್ಬಂದಿಯು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎರಡು ಪಿಸ್ತೂಲ್ಗಳು ಮತ್ತು 20 ಸುತ್ತಿನ ಮದ್ದುಗುಂಡುಗಳನ್ನು ಒಳಗೊಂಡಿದ್ದ ಬ್ಯಾಗ್ ಅನ್ನು ಕದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕಳ್ಳತನ ಮಾಡಿದ್ದ ಭದ್ರತಾ ಸಿಬ್ಬಂದಿಯ ಬ್ಯಾಗ್, ಮೊಬೈಲ್ ಫೋನ್, ದಾಖಲೆಗಳು ಮತ್ತು ಹಣದಂತಹ ಇತರ ವಸ್ತುಗಳ ಜೊತೆಗೆ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ 21 ರಂದು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಟಿಎಂಸಿ ಪಕ್ಷದ ಪ್ರಚಂಡ ಜಯದ ನಂತರ, ಮುಖ್ಯಮಂತ್ರಿ ಕಾಮಾಖ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅಸ್ಸಾಂಗೆ ಹೋಗಿದ್ದರು. ಮುಖ್ಯಮಂತ್ರಿಯ ಕೆಲ ಭದ್ರತಾ ಸಿಬ್ಬಂದಿ ಕರ್ತವ್ಯ ಮುಗಿಸಿ ರೈಲಿನಲ್ಲಿ ವಾಪಸಾಗುತ್ತಿದ್ದರು.
ಭದ್ರತಾ ಸಿಬ್ಬಂದಿ ಅಸ್ಸಾಂನಿಂದ ಹಿಂತಿರುಗುತ್ತಿದ್ದಾಗ ನ್ಯೂ ಕೂಚ್ ಬೆಹಾರ್ ರೈಲು ನಿಲ್ದಾಣದ ಬಳಿ ಬೆಳಿಗ್ಗೆ 4:45 ರ ಸುಮಾರಿಗೆ ಡೌನ್ ಕಾಂಚನ್ಜುಂಗಾ ಎಕ್ಸ್ಪ್ರೆಸ್ನಿಂದ ಶಸ್ತ್ರಾಸ್ತ್ರಗಳನ್ನು ಕಳವು ಮಾಡಲಾಗಿತ್ತು.
ಬ್ಯಾಗ್ ಪತ್ತೆಗಾಗಿ 'ಬೇಬಿ' ಎಂಬ ಹೆಸರಿನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಲವೆಡೆ ನಡೆದ ದಾಳಿ ಹಾಗೂ ವಿಚಾರಣೆ ಬಳಿಕ ಒಂದಷ್ಟು ಅನುಮಾನಸ್ಪದ ಜನರನ್ನು ಬಂಧಿಸಲಾಯಿತು. ಕೊನೆಗೆ ತಪನ್ ಬರ್ಮನ್ ಎಂಬ ವ್ಯಕ್ತಿಯಿಂದ ಹಣ ಮತ್ತು ದಾಖಲೆಗಳ ಸಮೇತ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ.
ಕೂಚ್ ಬೆಹಾರ್ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿಗಳ ಪಕ್ಕದ ಪೊದೆಯಲ್ಲಿ ಆಯುಧಗಳನ್ನು ಅಡಗಿಸಿಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದ.
ಈ ವೇಳೆ “ರೈಲ್ವೆ ಹಳಿಗಳ ಪಕ್ಕದಲ್ಲಿ ಪಿಸ್ತೂಲ್ ಮತ್ತು 20 ಸುತ್ತಿನ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಫೋನ್ ಅನ್ನು ಅಲಿಪುರ್ದೂರ್ ಜಿಲ್ಲೆಯಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ