ರಾಮನಗರ, ಡಿ. 24 (DaijiworldNews/HR): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಜ ಬಣ್ಣ ಅಧಿವೇಶನದಲ್ಲಿ ಬಯಲಾಗಿದ್ದು, ಬಿಜೆಪಿಯವರು ಹೊಡೆದಂಗೆ ಮಾಡುತ್ತಾರೆ, ಕಾಂಗ್ರೆಸ್ ನವರು ಅತ್ತಂಗೆ ಮಾಡ್ತಾರೆ. ಇವೆರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಮತಾಂತರ ನಿಷೇಧ ಕಾಯ್ದೆ ಬಗ್ಗೆ ಜೆಡಿಎಸ್ ವಿರೋಧ ಇದೆ. ನಮ್ಮ ಶಾಸಕರು ವಿರೋಧವಾಗಿ ಮತ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನ ಮಂಡಲದ ಅಧಿವೇಶನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನ ಪ್ರತಿನಿಧಿಯಾಗಿ ಗೆಸ್ಟ್ ಅಪೀಯರೆನ್ಸ್ ರೀತಿಯಲ್ಲಿ ಬಂದು ಹೋದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮತಾಂತರ ನಿಷೇಧ ಕಾಯಿದೆ ವಿಧಾನಸಭೆಯಲ್ಲಿ ಪಾಸ್ ಆಗಿದ್ದಕ್ಕೆ ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಎರಡು ನಾಲಗೆಯ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಮಂಗಳಾರತಿ ಆಗಿದೆ. ಕಾಂಗ್ರೆಸ್ ನಾಯಕರು ಮತಾಂತರ ನಿಷೇಧ ಕಾಯ್ದೆ ಬಗ್ಗೆ ವೀರಾವೇಶದಿಂದ ಭಾಷಣ ಬಿಗಿದರು. ಕ್ರೈಸ್ತ ಫಾದರ್ಗಳ ಜತೆಗೆ ಸಭೆ ಮಾಡಿದ್ದರು" ಎಂದು ಆರೋಪಿಸಿದ್ದಾರೆ.
ಇನ್ನು "ಮತಾಂತರ ನಿಷೇಧ ಮಸೂದೆ ಮಂಡಿಸುವ ಬಗ್ಗೆ ಸಿದ್ದರಾಮಯ್ಯ ಚಿಂತನೆ ನಡೆಸಿದ್ದು, ಈಗ ಬೆಳಗಾವಿ ಅಧಿವೇಶನದಲ್ಲಿ ಅವರ ಮುಖಕ್ಕೆ ಮಂಗಳಾರತಿಯಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಗ ಕಾನೂನು ಮಂತ್ರಿ ಆಗಿದ್ದ ಜಯಚಂದ್ರ ಅವರು ಈ ಕಾಯ್ದೆಯ ನೋಟ್ ತಂದಾಗ ಸಹಿ ಹಾಕಿದ್ದರು. ಬಳಿಕ ಅದನ್ನು ಆಗಿನ ಸಾಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ ಅವರ ಮುಂದೆ ಕೂಡ ಈ ನೋಟ್ ಹೋಗಿತ್ತು" ಎಂದಿದ್ದಾರೆ.