ಕಾನ್ಪುರ, ಡಿ 24 (DaijiworldNews/MS): ಸುಗಂಧ ದ್ರವ್ಯ ಇಂಡಸ್ಟ್ರಿಯ ಮಾಲೀಕ, ಕಾನ್ಪುರ್ ಮೂಲದ ಪಿಯೂಷ್ ಜೈನ್ ಉದ್ಯಮಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಶುಕ್ರವಾರ (ಡಿಸೆಂಬರ್ 24) ಬೆಳಗ್ಗೆ ದಾಳಿ ನಡೆಸಿದ್ದು, ಮನೆಯ ತುಂಬಾ ನೋಟಿನ ಕಂತೆ ನೋಡಿ ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಈವರೆಗೆ 150 ಕೋಟಿ ರೂ. ಸಿಕ್ಕಿದರೂ ಇನ್ನೂ ಲೆಕ್ಕ ಮಾಡುವುದು ನಿಂತಿಲ್ಲ!
ಐಟಿ ಅಧಿಕಾರಿಗಳು ಮನೆಯ ಎರಡು ವಾರ್ಡ್ ರೂಬ್ ಗಳಲ್ಲಿ ತುಂಬಿಸಿಟ್ಟಿದ್ದ ನೋಟಿನ ಕಂತೆಗಳನ್ನು ಗುಡ್ಡೆ ಹಾಕಿಕೊಂಡು ನೋಟು ಎಣಿಸುವ ಮೂರು ಮೆಷಿನ್ ಯಂತ್ರದ ಸಹಾಯದಿಂದ ಲೆಕ್ಕ ಹಾಕುತ್ತಿದ್ದಾರೆ.ಅಧಿಕಾರಿ ದಾಳಿ ನಡೆಸಿದ ಬಳಿಕ ಮನೆಯ ವಾರ್ಡ್ ರೋಬ್ಸ್ ಗಳಲ್ಲಿ ತುಂಬಿಸಿಟ್ಟಿರುವ ರಾಶಿ, ರಾಶಿ ಹಣದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೋಟಿನ ಕಂತೆಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ಸುತ್ತಿ ಹಳದಿ ಬಣ್ಣದ ಟೇಪ್ ಗಳಲ್ಲಿ ಮುಚ್ಚಲಾಗಿತ್ತು. ಈ ರೀತಿ ಸುಮಾರು 30 ನೋಟಿನ ಕಂತೆ ಸಿಕ್ಕಿದೆ. ಮನೆಯ ಮಧ್ಯದ ಹಾಲ್ ನಲ್ಲಿ ಬಟ್ಟೆ ಹಾಸಿ ನೆಲದ ಮೇಲೆ 2 ನೋಟಿನ ಗುಡ್ಡೆ ಪೇರಿಸಿರುವ ಅಧಿಕಾರಿಗಳು ಮೂರು ನೋಟು ಎಣಿಸುವ ಯಂತ್ರದ ಸಹಾಯದಿಂದ ಲೆಕ್ಕ ಮಾಡುತ್ತಿದ್ದಾರೆ.ಆದಾಯ ತೆರಿಗೆ ಅಧಿಕಾರಿಗಳು ಜೈನ್ ನಿವಾಸ ಇರುವ ಉತ್ತರಪ್ರದೇಶದ ಕಾನ್ಪುರ್, ಮುಂಬಯಿ ಹಾಗೂ ಗುಜರಾತ್ ನಲ್ಲಿಯೂ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.
ನಕಲಿ ಇನ್ವಾಯ್ಸ್ಗಳ ಮೂಲಕ ಮತ್ತು ಇ-ವೇ ಬಿಲ್ಗಳಿಲ್ಲದೆ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ. ಈ ನಕಲಿ ಇನ್ವಾಯ್ಸ್ಗಳನ್ನು ಕಾಲ್ಪನಿಕ ಸಂಸ್ಥೆಗಳ ಹೆಸರಿನಲ್ಲಿ ರಚಿಸಲಾಗಿದೆ ಎಂದು ಜಿಎಸ್ಟಿ ಅಧಿಕಾರಿಗಳು ತಿಳಿಸಿದ್ದಾರೆ