ಶಿವಮೊಗ್ಗ, ಡಿ.24 (DaijiworldNews/PY): ಕೊರೊನಾ ಪಾಸಿಟಿವ್ ಬಂದರೂ ಸಹ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಅವರು ಕಚೇರಿಗೆ ತೆರಳಿ ಫೈಲ್ ಪರಿಶೀಲನೆ ಮಾಡಿದ್ದಲ್ಲದೇ, ಜನರನ್ನು ಭೇಟಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ನಡುವೆ ಮೇಯರ್ ಅನ್ನು ಬಂಧಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಅವರಿಗೆ ಕೊರೊನಾ ಸೋಂಕು ತಗುಲಿದದೆ. ಅವರು ಕ್ವಾರಂಟೈನ್ಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕೊರೊನಾ ತಗುಲಿರುವ ವಿಚಾರ ತಿಳಿದಿದ್ದರೂ ಸಹ ಸುನೀತಾ ಅಣ್ಣಪ್ಪ ಅವರು ಪಾಲಿಕೆಗೆ ಬಂದಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ವಿಚಾರದ ಬಗ್ಗೆ ಆಮ್ ಆದ್ಮಿ ಪಕ್ಷದ ಶಿವಮೊಗ್ಗ ಘಟಕ ದೂರು ನೀಡಿದ್ದು, ಮೇಯರ್ ಸುನೀತಾ ಅಣ್ಣಪ್ಪ ಅವರು ತಮ್ಮ ಜವಾಬ್ದಾರಿಯನ್ನು ಮರೆತಿದ್ಧಾರೆ ಎಂದು ಆರೋಪಿಸಿದ್ಧಾರೆ.
ಎಎಪಿ ಪಕ್ಷದ ಕಾರ್ಯಕರ್ತರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಕ್ಷಣವೇ ಸುನೀತಾ ಅಣ್ಣಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವ ಆಮ್ ಆದ್ಮಿ ಪಕ್ಷ ಕಾರ್ಯಕರ್ತರು, ಡಿ.12ರಂದು ಮೇಯರ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆದರೂ ಅವರು ಪಾಲಿಕೆಯ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಅಲ್ಲದೇ, ಪಾಲಿಕೆಗೆ ಬಂದು ಪೈಲ್ಗಳನ್ನು ಪರಿಶೀಲಿಸಿದ್ದಾರೆ. ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರೂ ಮೇಯರ್ ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೇಯರ್ ವಿರುದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೂರು ನೀಡುತ್ತಿದ್ದಂತೆ ಶಿವಮೊಗ್ಗ ಬಿಜೆಪಿ ಮುಖಂಡರು ಮೇಯರ್ ಬೆಂಬಲಕ್ಕೆ ನಿಂತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಕೊರೊನಾ ಪಾಸಿಟಿವ್ ದೃಢಪಟ್ಟ ಬಳಿಕ ಮೇಯರ್ ಸುನೀತಾ ಅಣ್ಣಪ್ಪ ಅವರು ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಎಎಪಿ ಪಕ್ಷದವರಿಗೆ ಬೇರೆ ಕೆಲಸವಿಲ್ಲ. ಹಾಗಾಗಿ ಅವರು ದೂರು ನೀಡುತ್ತಿದ್ದಾರೆ ಎಂದಿದ್ದಾರೆ.
ತಮ್ಮ ಮೇಲಿನ ವಿವಾದದ ಬಗ್ಗೆ ಮೇಯರ್ ಸುನೀತಾ ಅಣ್ಣಪ್ಪ ಅವರು ಯಾವುದೇ ರೀತಿಯಾದ ಹೇಳಿಕೆ ನೀಡಿಲ್ಲ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.