ಚೆನ್ನೈ, ಡಿ 24 (DaijiworldNews/MS): ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಇಂದು ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರಿಗೆ ತಮಿಳುನಾಡು ಸರ್ಕಾರ ಪೆರೋಲ್ ನೀಡಿದೆ ಎಂದು ಮದ್ರಾಸ್ ಹೈಕೋರ್ಟ್ಗೆ ಗುರುವಾರ ತಿಳಿಸಲಾಗಿದೆ.
ನಳಿನಿ ಅವರ ತಾಯಿ ಎಸ್ ಪದ್ಮಾ ಅವರ ಹೇಬಿಯಸ್ ಕಾರ್ಪಸ್ ಅರ್ಜಿಯು ಹೆಚ್ಚಿನ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳಾದ ಪಿಎನ್ ಪ್ರಕಾಶ್ ಮತ್ತು ಆರ್ ಹೇಮಲತಾ ಅವರ ವಿಭಾಗೀಯ ಪೀಠಕ್ಕೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಹಸನ್ ಮೊಹಮ್ಮದ್ ಈ ವಿಷಯ ತಿಳಿಸಿದರು. ತನ್ನ ಅರ್ಜಿಯಲ್ಲಿ, ಪದ್ಮಾ ಅವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು ಅರೈಕೆಗಾಗಿ ತನ್ನ ಮಗಳು ಸನಿಹ ಇರಬೇಕೆಂದು ಬಯಸಿದ್ದರು. ಈ ಸಂಬಂಧ ಆಕೆ ಒಂದು ತಿಂಗಳ ಕಾಲ ಪೆರೋಲ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಕಳೆದ 29 ವರ್ಷಗಳಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಯನ್ನು ನಳಿನಿ ಶ್ರೀಹರನ್ ಅನುಭವಿಸುತ್ತಿದ್ದಾರೆ. ಸದ್ಯ ನಳಿನಿ ಶ್ರೀಹರನ್ ವೆಲ್ಲೂರಿನ ಮಹಿಳಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. 1991ರ ಮೇ. 21ರಂದು ತಮಿಳುನಾಡಿನಲ್ಲಿ ಚುನಾವಣೆ ರ್ಯಾಲಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಳಿನಿ, ಅವರ ಪತಿ ಮುರುಗನ್ ಸೇರಿ ಒಟ್ಟು ಏಳು ಮಂದಿಯನ್ನ ಕೋರ್ಟ್ ಅಪರಾಧಿಗಳು ಎಂದು ಘೋಷಿಸಿತ್ತು. ಎಲ್ಲರಿಗೂ ಗಲ್ಲು ಶಿಕ್ಷೆ ಪ್ರಕಟವಾಗಿತ್ತು. ನಂತರ ಇದನ್ನ ಜೀವಿತಾವಧಿ ಶಿಕ್ಷೆಯಾಗಿ ಮಾರ್ಪಾಟು ಮಾಡಲಾಗಿದೆ.