ನವದೆಹಲಿ, ಡಿ 24 (DaijiworldNews/MS): ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಬಗ್ಗೆ ಸುಳಿವು ನೀಡಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯಸಭಾ ಸಂಸದ ಸುಬ್ರಮಣಿಯನ್ ತಮ್ಮ ಟ್ವೀಟ್, ಪೋಸ್ಟ್ಗಳ ಮೂಲಕ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೇರ ದಾಳಿ ನಡೆಸುವ ಸ್ವಾಮಿ, ಇಂದು ಟ್ವಿಟರ್ನಲ್ಲಿ ಮಾರ್ಮಿಕ ಮಾತುಗಳನ್ನಾಡಿದ್ದಾರೆ.
ಓಮೈಕ್ರಾನ್ಗಾಗಿ ಲಾಕ್ಡೌನ್ ಆಗಬಹುದು ಮತ್ತು ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ಚುನಾವಣೆಯನ್ನು ಸೆಪ್ಟೆಂಬರ್ಗೆ ಮುಂದೂಡಿದರೂ ಆಶ್ಚರ್ಯಪಡಬೇಕಿಲ್ಲ. ಈ ವರ್ಷದ ಆರಂಭದಲ್ಲಿ ನೇರವಾಗಿ ಮಾಡಲು ಸಾಧ್ಯವಾಗದ್ದನ್ನು, ಮುಂದಿನ ವರ್ಷದ ಆರಂಭದಲ್ಲಿ ಪರೋಕ್ಷವಾಗಿ ಮಾಡಬಹುದು,’ ಎಂದು ಅವರು ಬರೆದುಕೊಂಡಿದ್ದಾರೆ.