ಅಸ್ಸಾಂ, ಡಿ 24 (DaijiworldNews/MS): ಗೋಹತ್ಯೆ ಮತ್ತು ಗೋ ಕಳ್ಳಸಾಗಾಣಿಕೆಯನ್ನು ಕೊನೆಗೊಳಿಸುವ ಉದ್ದೇಶದಿಂದ, ಅಸ್ಸಾಂ ಸರ್ಕಾರವು ತನ್ನ ಜಾನುವಾರು ಸಂರಕ್ಷಣಾ ಕಾಯ್ದೆಗೆ ಹಲವಾರು ಪ್ರಮುಖ ಬದಲಾವಣೆಗಗಾಗಿ ತಿದ್ದುಪಡಿಗಳನ್ನು ಜಾರಿಗೆ ತಂದಿದೆ. ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ 2021 ಅನ್ನು ಮಂಡಿಸಿದ ನಾಲ್ಕು ತಿಂಗಳ ನಂತರ ಗುರುವಾರ ಅಸ್ಸಾಂ ಶಾಸಕಾಂಗ ಸಭೆಯು ಈ ಮಸೂದೆಯನ್ನು ಅಂಗೀಕರಿಸಿತು.
"ರಾಜ್ಯದಲ್ಲಿ ಜಾನುವಾರುಗಳ ರಕ್ಷಣೆಯನ್ನು ಬಲಪಡಿಸುವ ಉದ್ದೇಶದಿಂದ, ನಾವು ಜಾನುವಾರು ಸಂರಕ್ಷಣೆ ಕಾಯಿದೆ 2021 ಗೆ ತಿದ್ದುಪಡಿಯನ್ನು ತಂದಿದ್ದೇವೆ. ಹೊಸ ಸೇರ್ಪಡೆಗಳಿಂದ ಕೃಷಿ ಉದ್ದೇಶಗಳಿಗಾಗಿ ಜಾನುವಾರುಗಳ ಸಾಗಣೆಯನ್ನು ಸುಲಭಗೊಳಿಸುತ್ತದೆ ಮತ್ತು ಜಾನುವಾರು ಕಳ್ಳಸಾಗಣೆದಾರರಿಗೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ" ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕಾಯ್ದೆಗೆ ಹೊಸ ಸೆಕ್ಷನ್ ಸೇರಿಸಲಾಗಿದ್ದು, ಇದರ ಅನ್ವಯ ತನಿಖಾಧಿಕಾರಿಗೆ ಗೋ ಕಳ್ಳರ ಅಕ್ರಮ ಸಾಗಾಣಿಕೆದಾರ ಆರೋಪಿಯ ಮನೆ ಪ್ರವೇಶಿಸಿ, ತಪಾಸಣೆ ಮತ್ತು ಶೋಧ ನಡೆಸಲು ಮತ್ತು ಆರೋಪಿಯನ್ನು ಬಂಧಿಸಲು ಅವಕಾಶ ನೀಡಲಾಗಿದೆ. ಜತೆಗೆ ಅಕ್ರಮ ಜಾನುವಾರು ಮಾರಾಟದಿಂದ ಬಂದ ಹಣದಲ್ಲಿ ಕಳೆದ ಆರು ವರ್ಷಗಳಲ್ಲಿ ಕ್ರೋಢೀಕರಿಸಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.