ಬೆಳಗಾವಿ, ಡಿ.22 (DaijiworldNews/SM): ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಅಂಗೀಕಾರಗೊಂಡಿತು. ಮಸೂದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧ ವ್ಯಕ್ತಪಡಿಸಿತ್ತು. ಕಲಾಪದಲ್ಲಿ ವಿಪಕ್ಷ ಸದಸ್ಯರ ಭಾರೀ ವಿರೋಧದ ಮಧ್ಯೆ ಮತಾಂತರ ನಿಷೇಧ ವಿಧೇಯಕಕ್ಕೆ ಸದಸ್ಯರ ಧ್ವನಿಮತದ ಮೂಲಕ ವಿಧಾನಸಭೆ ಒಪ್ಪಿಗೆ ನೀಡಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ವಿರೋಧದ ನಡುವೆಯೂ ಡಿ.21ರಂದು ಮತಾಂತರ ನಿಷೇಧ ಕಾಯ್ದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ್ದರು. ಅಂದು ಕೂಡ ಸದನದ ಬಾವಿಗಿಳಿದು ಕಾಂಗ್ರೆಸ್ ತೀವ್ರ ವಿರೋಧಿಸಿತ್ತು. ಎರಡು ದಿನದಿಂದ ಈ ಬಗ್ಗೆ ವಾದ-ವಿವಾದ ನಡೆಯುತ್ತಲೇ ಇತ್ತು. ಇಂದು ಸುದೀರ್ಘವಾಗಿ ನಡೆದ ಚರ್ಚೆಗೆ ಆಡಳಿತ ಪಕ್ಷ ಸಿದ್ಧವಾಗಿಯೇ ಬಂದಿತ್ತು. 2016ರಲ್ಲಿ ಕಾನೂನು ಆಯೋಗ ಸಿದ್ಧಪಡಿಸಿದ್ದ ಮತಾಂತರ ನಿಷೇಧ ವಿಧೇಯಕದ ಕರಡು ಪ್ರತಿಗೆ ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಒಪ್ಪಿಗೆ ನೀಡಿದ್ದನ್ನು ಬಿಜೆಪಿ ಪ್ರದರ್ಶಿಸಿತು. ಅಷ್ಟೇ ಅಲ್ಲ, ಆ ಪ್ರತಿಗೆ ಅಂದಿನ ಸಿಎಂ ಸಿದ್ದರಾಮಯ್ಯ ಕರಡು ಪ್ರತಿ ಒಪ್ಪಿ ಕ್ಯಾಬಿನೆಟ್ಗೆ ಕಡತ ಮಂಡಿಸುವಂತೆ ಸಹಿ ಮಾಡಿದ್ದರ ಬಗ್ಗೆ ಸಚಿವ ಮಾಧುಸ್ವಾಮಿ ಹೇಳುತ್ತಿದ್ದಂತೆ, ಇದಕ್ಕೆ ಉತ್ತರಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯಇಕ್ಕಟ್ಟಿಗೆ ಸಿಲುಕಿದ ಪ್ರಸಂಗವೂ ನಡೆಯಿತು.
ಜೆಡಿಎಸ್ ಕೂಡಾ ಮಸೂದೆಗೆ ವಿರೋಧ ವ್ಯಕ್ತಪಡಿತ್ತು. ಮಸೂದೆ ಖಂಡಿಸಿ ಕಾಂಗ್ರೆಸ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರೆ ಬಿಜೆಪಿ ಮಸೂದೆಯನ್ನು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್ ಪ್ರತಿಭಟನೆ ನಡುವೆಯೂ ವಿಧಾನಸಭೆಯಲ್ಲಿ ಇದೀಗ ಮಸೂದೆ ಅಂಗೀಕಾರಗೊಂಡಿದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ತರುತ್ತಿರುವುದು ಯಾವುದೇ ಧರ್ಮದ ವಿರುದ್ಧ ಅಲ್ಲ. ಯಾವುದೇ ಹಕ್ಕು ಮೊಟಕುಗೊಳಿಸುವ ಉದ್ದೇಶವಿಲ್ಲ, ಈಗಾಗಲೇ ಎಂಟು ರಾಜ್ಯಗಳು ಅನುಷ್ಠಾನ ಮಾಡುತ್ತಿವೆ, 9ನೇ ರಾಜ್ಯ ಕರ್ನಾಟಕ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಕ್ಷಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು