ಹುಬ್ಬಳ್ಳಿ, ಡಿ.23 (DaijiworldNews/PY): "ಹಿಂದೂ ಧರ್ಮಕ್ಕೆ ವಿರುದ್ದವಾಗಿ ರಾಜ್ಯದ ಧರ್ಮಸ್ಥಳ, ಆರ್ಟ್ ಆಫ್ ಲಿವಿಂಗ್ ಹಾಗೂ ಇಸ್ಕಾನ್ನಲ್ಲಿ ಜ.1ರಂದು ಹೊಸ ವರ್ಷಾಚರಣೆ ಮಾಡಿದರೆ ಧರಣಿ ನಡೆಸಲಾಗುವುದು" ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ಧಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಯುಗಾದಿಯಂದು ಹಿಂದೂಗಳಿಗೆ ಹೊಸ ವರ್ಷ ಆರಂಭವಾಗುತ್ತದೆ. ಹಾಗಾಗಿ ಕ್ರೈಸ್ತರ ಹೊಸ ವರ್ಷಾಚರಣೆ ಮಾಡಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಆರ್ಟ್ ಆಫ್ ಲಿವಿಂಗ್ನ ರವಿಶಂಕರ ಗುರೂಜಿ ಹಾಗೂ ಇಸ್ಕಾನ್ ಮಧುದಾಸ ಪಂಡಿತ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ" ಎಂದಿದ್ದಾರೆ.
"ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕ್ರೈಸ್ತರ ಹೊಸ ವರ್ಷವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸ್ವಾಗತ ಫಲಕ ಅಳವಡಿಕೆ ಸೇರಿದಂತೆ ದೀಪಾಲಂಕಾರ ಹಾಗೂ ಪೂಜೆಯೊಂದಿಗೆ ಸಿಹಿ ವಿತರಿಸಲಾಗುತ್ತದೆ. ಇದರಿಂದ ಹಿಂದೂ ಧರ್ಮಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ" ಎಂದು ಹೇಳಿದ್ದಾರೆ.
"ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಂಡಿಸಿರುವುದು ಸ್ವಾಗತಾರ್ಹ. ಆದರೆ, ಇದರ ಹಿಂದೆ ಹಿಂದೂಗಳನ್ನು ಓಲೈಸುವ ತಂತ್ರ ಇದೆ. ಗೋಹತ್ಯೆ ಕಾಯ್ದೆಯಂತೆ ಈ ಕಾಯ್ದೆ ಕೇವಲ ನೆಪ ಮಾತ್ರಕ್ಕೆ ಇರಬಾರದು" ಎಂದಿದ್ಧಾರೆ.
"ಮತಾಂತರವಾದವರು ಚರ್ಚ್ ಲೆಕ್ಕದಲ್ಲಿ ಕ್ರೈಸ್ತರಾಗಿ ಹಾಗೂ ಸರ್ಕಾರದ ದಾಖಲೆಗಳಲ್ಲಿ ಹಿಂದೂಗಳಾಗಿರುತ್ತಾರೆ. ಈ ರೀತಿಯ ಮತಾಂತರದಿಂದ ಕ್ರೈಸ್ತರ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್ಸಿಗರು ತಮ್ಮ ನಾಯಕಿ ಸೋನಿಯಾ ಗಾಂಧಿ ಅವರ ಓಲೈಕೆಗಾಗಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ" ಎಂದು ಹೇಳಿದ್ಧಾರೆ.