ಬೆಳಗಾವಿ, ಡಿ.23 (DaijiworldNews/PY): "2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಮತಾಂತರ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಎಲ್ಲವನ್ನು ವಾಪಸ್ ಪಡೆಯುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತಾಂತರ ನಿಷೇಧ ಕಾಯ್ದೆ ಮಾತ್ರವಲ್ಲ, ಯಾವುದೇ ಕಾಯ್ದೆ ಜಾರಿಗೆ ತಂದಲ್ಲಿ ನಾವು ವಾಪಸ್ ಪಡೆಯುತ್ತೇವೆ. ಇದನ್ನು ನಾನು ಅನ್ ರೆಕಾರ್ಡ್ ಹೇಳುತ್ತಿದ್ದೇನೆ" ಎಂದಿದ್ದಾರೆ.
"ಬಿಜೆಪಿಯಲ್ಲಿ ಸಂಖ್ಯಾಬಲವಿದ್ದು, ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ಯಾರೇ ಆಗಲಿ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಮುಖ್ಯ. ವಿಧೇಯಕವನ್ನು ಮತಕ್ಕೆ ಹಾಕುವ ಪ್ಲಾನ್ ನಡೆಯುತ್ತಿದೆ. ನಮಗೆ ವಿಧಾನಸಭೆಯಲ್ಲಿ ಅಗತ್ಯ ಸಂಖ್ಯಾಬಲವಿಲ್ಲ. ಆದರೆ, ನಮಗೆ ವಿಧಾನ ಪರಿಷತ್ನಲ್ಲಿ ಬಹುಮತವಿದೆ" ಎಂದು ಹೇಳಿದ್ದಾರೆ.
ಈ ಸಂದರ್ಭ ಜೆಡಿಎಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು, "ಜೆಡಿಎಸ್ ವಿಧಾನಸಭೆಯಲ್ಲಿ ಹೇಳುವುದು ಒಂದು ಮಾಡುವುದು ಇನ್ನೊಂದು. ವಿಧೇಯಕ ಮಂಡನೆಯ ಸಂದರ್ಭ ವಿರೋಧ ಮಾಡುತ್ತಾರೆ. ಕೊನೆಯ ಹಂತದಲ್ಲಿ ಕೈಕೊಡುತ್ತಾರೆ. ಸಭಾತ್ಯಾಗ ಮಡುವುದು ಸಹ ಬಿಜೆಪಿಗೆ ಬೆಂಬಲಿಸಿದಂತೆ" ಎಂದಿದ್ದಾರೆ.