ಬೆಳಗಾವಿ, ಡಿ.23 (DaijiworldNews/PY): "ಸರ್ಕಾರವು, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು ನೀಡಿದ್ದು, 200 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಿ ನಿರ್ವಹಿಸಲಾಗುತ್ತಿದೆ. ಈ ಶಾಲೆಯಲ್ಲಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಬಳಿಕ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
"ಶಾಲೆಗಳಿಂದ ಹೊರಗುಳಿದ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ತರಲು ಈಗಾಗಲೇ ಮುಚ್ಚಲ್ಪಟ್ಟ ಸರ್ಕಾರಿ ಉರ್ದು ಶಾಲೆಗಳ ಜಾಗದಲ್ಲಿ 200 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಆರಂಭಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ" ಎಂದಿದ್ದಾರೆ.
"ಹೊಸದಾಗಿ ಶಾಲೆಗಳನ್ನು ಆರಂಭಿಸಲು ಜನಪ್ರತಿನಿಧಿಗಳಿಂದ ಪ್ರಸ್ತಾವನೆಗಳು ಬಂದಿವೆ. ಇವುಗಳ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಅಲ್ಲಿಯ ತನಕ ಅತಿಥಿ ಶಿಕ್ಷಕರ ಮೂಲಕ ಶಾಲೆಗಳನ್ನು ನಡೆಸಲಾಗುವುದು" ಎಂದು ತಿಳಿಸಿದ್ದಾರೆ.
"ಕೊರೊನಾ ಲಾಕ್ಡೌನ್ ಕಾರಣದಿಂದ ಹಲವಾರು ಅನುದಾನಗಳನ್ನು ಕಡಿತಗೊಳಿಸಲಾಗಿದೆ. ಅಲ್ಪಸಂಖ್ಯಾತೆ ಶಿಕ್ಷಣ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಒದಗಿಸಲಾಗುವುದು" ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ತಮ್ಮ ಕ್ಷೇತ್ರದಲ್ಲಿ 7 ಶಾದಿ ಮಹಲ್ಗಳು ಮಂಜೂರಾಗಿದ್ದರೂ ಕೂಡ ಅನುದಾನ ಬಿಡುಗಡೆಯಾಗದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.