ಲಖನೌ, ಡಿ 23 (DaijiworldNews/MS): ಹಿಂದೂ ಧರ್ಮವನ್ನು ಐಎಸ್ಐಎಸ್ ಹಾಗೂ ಬೊಕೊ ಹರಾಮ್ ನಂತಹ ಇಸ್ಲಾಮಿಕ್ ಉಗ್ರ ಸಂಘಟನೆಗಳಿಗೆ ತಾವು ಬರೆದ ಪುಸ್ತಕದಲ್ಲಿ ಹೋಲಿಕೆ ಮಾಡಿ ವಿವಾದಕ್ಕೀಡಾರುವ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸನಾತನ ಹಿಂದೂ ಧರ್ಮವನ್ನು ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಲಖನೌ ಕೋರ್ಟ್ ಬುಧವಾರದಂದು ಆದೇಶ ನೀಡಿದೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶಂತನು ತ್ಯಾಗಿ ಎಫ್ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ.
ಸಲ್ಮಾನ್ ಖುರ್ಷಿದ್ ಅವರ Sunrise Over Ayodhya: Nationhood in Our Times ಎಂಬ ಪುಸ್ತಕದಲ್ಲಿ ಹಿಂದೂ ಧರ್ಮವನ್ನು ಉಗ್ರ ಸಂಘಟನೆಗಳೊಂದಿಗೆ ಹೋಲಿಕೆ ಮಾಡಿದ್ದರು.
ಕಾನೂನಿನ ಸೂಕ್ತ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದ್ದು ಮುಂದಿನ ಮೂರು ದಿನಗಳಲ್ಲಿ ಎಫ್ಐಆರ್ ಪ್ರತಿಯನ್ನು ನ್ಯಾಯಾಲಯಕ್ಕೆ ಕಳುಹಿಸಬೇಕು’ ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಪುಸ್ತಕದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಶುಭಾಂಗಿ ತಿವಾರಿ ಎಂಬುವವರು ಸೆಕ್ಷನ್ 156 (3) ಸಿಆರ್ ಪಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ.
ಕಾಂಗ್ರೆಸ್ ನಾಯಕನ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು, ಆದರೆ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.