ನವದೆಹಲಿ, ಡಿ 23 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವರ್ಚ್ಯುಯಲ್ ಸಭೆಯಲ್ಲಿ 2 ಗಂಟೆ ಭಾಗಿಯಾದರೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಮಾತನಾಡುವ ಅವಕಾಶವೇ ದೊರಕಲಿಲ್ಲ ಇದರಿಂದ ಬ್ಯಾನರ್ಜಿಯವರಿಗೆ ಅವಮಾನ ಆಗಿದೆ ಎಂದು ರಾಜ್ಯದ ಸಚಿವಾಲಯದ ಉನ್ನತ ಮೂಲಗಳು ಬಹಿರಂಗಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಡಿ.22 ರಂದು 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ದ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ "ಆಜಾದಿ ಕಿ ಅಮೃತ್ ಮಹೋತ್ಸವ್" ಎಂಬ ವರ್ಚುವಲ್ ಸಭೆಯನ್ನು ಏರ್ಪಡಿಸಿದ್ದರು.
ಮಮತಾ ಅವರು ಸಭೆಯಲ್ಲಿ ಎರಡು ಗಂಟೆ ಭಾಗಿಯಾದರೂ ಅವರಿಗೆ ಪ್ರಧಾನಿಯವರು ಮಾತನಾಡಲು ಅವಕಾಶ ನೀಡಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ . ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅವರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು . ಇದರಿಂದ ಇಡೀ ರಾಜ್ಯದ ಆಡಳಿತ ವಿಭಾಗಕ್ಕೆ ನೋವುಂಟಾಗಿದೆ ಎಂದು ರಾಜ್ಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಮಾತನಾಡುವವರ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರು ಇಲ್ಲದ ಕಾರಣ ಅವರಿಗೆ ಮಾತನಾಡುವುದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.