ಚಿಕ್ಕಮಗಳೂರು, ಡಿ.22 (DaijiworldNews/SM): ಬೆಳಗಾವಿಯಲ್ಲಿ ಎಂಇಎಸ್ ಜೊತೆ ಕಾಂಗ್ರೆಸ್ ಸೇರಿಕೊಂಡು ಕುತಂತ್ರ ನಡೆಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಹಾಗೂ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನವನ್ನು ವಿಫಲ ಮಾಡಬೇಕು ಎಂಬುವುದು ಕಾಂಗ್ರೆಸ್ ನ ಹಿಡನ್ ಅಜೆಂಡಾವಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ ಎಂಬ ಅನುಮಾನ ಇದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಮರಾಠಿಗರು ಹಾಗೂ ಕನ್ನಡಿಗರು ಎಂಬ ಭೇದ ಭಾವ ಮಾಡಿಲ್ಲ. ಯಾವುದೇ ಯೋಜನೆಯನ್ನು ಕೊಡುವಾಗ ಕನ್ನಡಿಗರು, ಮರಾಠಿಗರು ಅಷ್ಟೇ ಅಲ್ಲ ಹಿಂದೂ, ಮುಸ್ಲೀಂ, ಕ್ರೈಸ್ತ ಸೇರಿದಂತೆ ಎಲ್ಲರಿಗೂ ಬಿಜೆಪಿ ಸರ್ಕಾರ ಏಕಪ್ರಕಾರದಲ್ಲಿ ವಿತರಿಸುತ್ತಾ ಬಂದಿದೆ. ಆದರೆ, ಕೆಲವು ಕಾಣದ ಕೈಗಳು ಕುತಂತ್ರ ನಡೆಸುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.