ಬೆಳಗಾವಿ, ಡಿ.22 (DaijiworldNews/SM): ಪ್ರತಿಪಕ್ಷಗಳ ವಿರೋಧದ ನಡುವೆಯೇ ಸದನದಲ್ಲಿ ಆಡಳಿತ ಪಕ್ಷ ಬಿಜೆಪಿ ಪಕ್ಷ ಮತಾಂತರ ನಿಷೇಧ ಮಸೂದೆ ಮಂಡಿಸಿದ್ದು, ಗುರುವಾರದಂದು ಮಸೂದೆ ಮೇಲೆ ಚರ್ಚೆಯಾಗುವ ಸಾಧ್ಯತೆ ಇದೆ.
ಮಂಗಳವಾರದಂದು ಮಧ್ಯಾಹ್ನ ನಂತರ ಸದನದಲ್ಲಿ ಮಸೂದೆಯನ್ನು ಮಂಡಿಸಿದೆ. ಪ್ರತಿಪಕ್ಷಗಳು ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯಿದೆ-2021 ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದರು. ಈ ವೇಳೆ ಕದ್ದುಮುಚ್ಚಿ ಏಕೆ ಮಸೂದೆ ಮಂಡಿಸುತ್ತಿದ್ದೀರಿ ಎಂದು ಪ್ರತಿಪಕ್ಷ ಕಾಂಗ್ರೆಸ್ ಘೋಷಣೆಯೊಂದಿಗೆ ಸಭಾತ್ಯಾಗ ನಡೆಸಿತ್ತು.
ಇವತ್ತು ಮಧ್ಯಾಹ್ನದ ಭೋಜನ ವಿರಾಮದ ನಂತರ ಸಭೆ ಸೇರಿದಾಗ ಸಾಯಂಕಾಲ 5 ರಿಂದ 6 ರವರೆಗೆ ಮತಾಂತರ ನಿಷೇಧದ ಬಿಲ್ ಅನ್ನು ಚರ್ಚೆ ಮಾಡೋಣ ಎಂದು ಸಭಾಧ್ಯಕ್ಷರು ಹೇಳಿದರು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ, ಮತಾಂತರ ನಿಷೇಧ ಮಸೂದೆಯನ್ನು ನಾಳೆ ಮಧ್ಯಾಹ್ನದ ಒಳಗೆ ವಿಧಾನ ಪರಿಷತ್ ಗೆ ಕಳುಹಿಸಿಕೊಡಬೇಕಾಗಿದೆ ಎಂದು ಹೇಳಿದರು.
ಇನ್ನು ಮಧ್ಯಾಹ್ನದ ಬಳಿಕ ಉತ್ತರ ಕನ್ನಡದ ಬಗ್ಗೆ ಚರ್ಚೆ ನಡೆಸಲು ನಿರ್ಧಾರ ಮಾಡಲಾಗಿದೆ.