ಕಾನ್ಪುರ, ಡಿ.22 (DaijiworldNews/HR): ಲವ್ ಜಿಹಾದ್ ಕಾಯ್ದೆಯಡಿ ಮೊದಲ ತೀರ್ಪು ಪ್ರಕಟಿಸಲಾಗಿದ್ದು, ಯುವಕನಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 30,000 ರೂಪಾಯಿ ದಂಡ ವಿಧಿಸಿ ಕಾನ್ಪುರ ನ್ಯಾಯಾಲಯ ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
2017ರ ಮೇ ತಿಂಗಳಲ್ಲಿ ಈ ಘಟನೆ ನಡೆದಿದ್ದು, ಜಾವೇದ್ ಎಂಬ ಮುಸ್ಲಿಂ ಯುವಕ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಬಾಲಕಿಯೊಬ್ಬಳನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಬಳಿಕ ಬಾಲಕಿಯನ್ನು ಕರೆದುಕೊಂಡು ಪರಾರಿಯಾಗಿದ್ದ.
ಇನ್ನು ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರು ದಿನ ಯುವಕನನ್ನು ಬಂಧಿಸಿದ್ದರು.
ತನ್ನ ಮೇಲೆ ಯುವಕ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ಆರೋಪಿಸಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು.
ಇನ್ನು ಉತ್ತರ ಪ್ರದೇಶದಲ್ಲಿ ಬಲವಂತದ ಮತಾಂತರ ನಡೆಸಿದರೆ ಕನಿಷ್ಠ 15,000 ರೂ. ದಂಡದ ಜೊತೆಗೆ ಒಂದು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ, ಎಸ್ಸಿ ಹಾಗೂ ಎಸ್ಟಿ ಸಮುದಾಯದ ಅಪ್ರಾಪ್ತರು/ಮಹಿಳೆಯರನ್ನು ಮತಾಂತರಿಸಿದರೆ ಮೂರರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.